ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಪ್ರೀಮಿಯರ್ ಲೀಗ್ 2026ರಲ್ಲಿ ಮತ್ತೊಂದು ರೋಚಕ ಪಂದ್ಯ ಅಭಿಮಾನಿಗಳಿಗೆ ರಸವತ್ತಾದ ಕ್ಷಣಗಳನ್ನು ನೀಡಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 4 ರನ್‌ಗಳ ಅಂತರದಲ್ಲಿ ರೋಚಕ ಜಯ ಸಾಧಿಸಿತು. ಈ ಮೂಲಕ ಗುಜರಾತ್ ತಂಡ ಸತತ ಎರಡನೇ ಗೆಲುವು ದಾಖಲಿಸಿದರೆ, ಡೆಲ್ಲಿ ತಂಡ ಎರಡನೇ ಸೋಲಿನ ಕಹಿ ಅನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 210 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ತಂಡದ ಪರ ಸೋಫಿ ಡಿವೈನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, 42 ಎಸೆತಗಳಲ್ಲಿ 95 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ನಾಯಕಿ ಆಶ್ಲೇ ಗಾರ್ಡ್ನರ್ 49 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು. ಡೆಲ್ಲಿ ಪರ ನಂದಿನಿ ಶರ್ಮಾ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ಸೇರಿ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದರು.
ಇದನ್ನೂ ಓದಿ: FOOD | ಫಟಾಫಟ್ ಅಂತ ರೆಡಿ ಆಗುತ್ತೆ ಪಾಲಕ್ ರೈಸ್! ನೀವೂ ಒಮ್ಮೆ ಟ್ರೈ ಮಾಡಿ
210 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಲಿಜೆಲ್ಲೆ ಲೀ 86 ರನ್ ಹಾಗೂ ಲಾರಾ ವೋಲ್ವಾರ್ಡ್ 77 ರನ್‌ಗಳೊಂದಿಗೆ ಗೆಲುವಿನ ಭರವಸೆ ಮೂಡಿಸಿದರು. ಆದರೆ ಕೊನೆಯ ಓವರ್‌ನಲ್ಲಿ 7 ರನ್ ಬೇಕಿದ್ದ ಸಂದರ್ಭದಲ್ಲಿ ಸೋಫಿ ಡಿವೈನ್ ಶಿಸ್ತುಬದ್ಧ ಬೌಲಿಂಗ್ ಮೂಲಕ ಕೇವಲ 2 ರನ್ ನೀಡಿದರು. ಲಾರಾ ವೋಲ್ವಾರ್ಡ್ ಮತ್ತು ಜೆಮಿಮಾ ರೊಡ್ರಿಗಸ್ ವಿಕೆಟ್‌ಗಳನ್ನು ಕಬಳಿಸಿ ಗುಜರಾತ್ ಗೆಲುವು ಖಚಿತಪಡಿಸಿದರು.
ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಡೆಲ್ಲಿ, ಈ ಸೋಲಿನೊಂದಿಗೆ ಟೂರ್ನಿಯಲ್ಲಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ. ಗುಜರಾತ್ ಜೈಂಟ್ಸ್ ಆತ್ಮವಿಶ್ವಾಸದೊಂದಿಗೆ ಮುಂದಿನ ಪಂದ್ಯಕ್ಕೆ ಸಜ್ಜಾಗಿದೆ.

