ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಭದ್ರತಾ ಆತಂಕ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆಯ ಸಮೀಪ ಪಾಕಿಸ್ತಾನದಿಂದ ಡ್ರೋನ್ ಚಲನವಲನ ಹೆಚ್ಚುತ್ತಿರುವುದು ಭದ್ರತಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ.
ಭದ್ರತಾ ಮೂಲಗಳ ಮಾಹಿತಿ ಪ್ರಕಾರ, ಕಳೆದ ಕೆಲ ಗಂಟೆಗಳ ಅವಧಿಯಲ್ಲಿ ಐದು ಡ್ರೋನ್‌ಗಳು ಗಡಿ ಭಾಗಗಳಲ್ಲಿ ಪತ್ತೆಯಾಗಿವೆ. ಪೂಂಚ್, ನೌಶೇರಾ, ಧರ್ಮಶಾಲಾ, ರಾಮಗಢ ಹಾಗೂ ಪರಾಖ್ ಪ್ರದೇಶಗಳ ಮೇಲೆ ಡ್ರೋನ್‌ಗಳು ಹಾರಿದ ವರದಿಗಳು ಲಭ್ಯವಾಗಿವೆ. ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆ ಬಳಿ ಕಾಣಿಸಿಕೊಂಡ ಪಾಕಿಸ್ತಾನಿ ಡ್ರೋನ್ ಮೇಲೆ ಭಾರತೀಯ ಸೇನೆ ತಕ್ಷಣ ಗುಂಡು ಹಾರಿಸಿದೆ.
ಇದನ್ನೂ ಓದಿ: FOOD | ಆರೋಗ್ಯಕರ ರಾಗಿ ಇಡ್ಲಿ ಹೇಗೆ ಮಾಡೋದು ಗೊತ್ತಾ? ಇಲ್ಲಿದೆ ಸಿಂಪಲ್ ರೆಸಿಪಿ
ಅಧಿಕಾರಿಗಳ ಪ್ರಕಾರ, ಈ ಎಲ್ಲಾ ಡ್ರೋನ್‌ಗಳು ಪಾಕಿಸ್ತಾನದ ಭೂಭಾಗದಿಂದ ಬಂದಿದ್ದು, ಕೆಲ ನಿಮಿಷಗಳ ಕಾಲ ಭಾರತದ ಗಡಿ ಒಳಗೆ ಚಲಿಸಿ ನಂತರ ಹಿಂದಕ್ಕೆ ಹಿಂತಿರುಗಿವೆ. ಇದೇ ವೇಳೆ, ಶುಕ್ರವಾರ ರಾತ್ರಿ ಸಾಂಬಾ ಜಿಲ್ಲೆಯ ಘಗ್ವಾಲ್ ಸಮೀಪದ ಪಲೋರಾ ಗ್ರಾಮದಲ್ಲಿ ಪಾಕಿಸ್ತಾನದಿಂದ ಡ್ರೋನ್ ಮೂಲಕ ಎಸೆದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಗಡಿ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮತ್ತು ನಿಗಾವಹಿಸುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಪಡೆಗಳು ಪೂರ್ಣ ಸಿದ್ಧತೆಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

