ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೋಪಾಲ್ ರಾಜಮನೆತನದ ಭೂಮಿಗೆ ಸಂಬಂಧಿಸಿದ ಬಹುಕಾಲದ ವಿವಾದದಲ್ಲಿ ಸ್ಥಳೀಯ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ನಯಾಪುರ ಪ್ರದೇಶದ 16.62 ಎಕರೆ ಮೌಲ್ಯಯುತ ಜಮೀನಿನ ಮಾಲೀಕತ್ವ ವಿಚಾರದಲ್ಲಿ ನಟ ಸೈಫ್ ಅಲಿ ಖಾನ್, ಅವರ ತಾಯಿ ಶರ್ಮಿಳಾ ಟ್ಯಾಗೋರ್, ಸಹೋದರಿ ಸೋಹಾ ಅಲಿ ಖಾನ್ ಸೇರಿದಂತೆ ಭೋಪಾಲ್‌ನ ಹಿಂದಿನ ರಾಜಮನೆತನದ ಕಾನೂನುಬದ್ಧ ಉತ್ತರಾಧಿಕಾರಿಗಳ ಪರವಾಗಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಈ ಜಮೀನಿನ ಮೇಲೆ ಹಕ್ಕು ಕೇಳಿ ಸಲ್ಲಿಸಲಾಗಿದ್ದ ಸಿವಿಲ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಸ್ಥಳೀಯ ನಿವಾಸಿಗಳಾದ ಮೂವರು, ಈ ಭೂಮಿಯನ್ನು 1936ರಲ್ಲಿ ಭೋಪಾಲ್‌ನ ಕೊನೆಯ ನವಾಬ ಹಮೀದುಲ್ಲಾ ಖಾನ್ ತಮ್ಮ ತಂದೆಗೆ ಉಡುಗೊರೆಯಾಗಿ ನೀಡಿದ್ದರು ಎಂದು ವಾದಿಸಿದ್ದರು. ಆದರೆ ಈ ಹೇಳಿಕೆಯನ್ನು ದೃಢಪಡಿಸುವ ಪಕ್ಕಾ ಕಾನೂನು ಪುರಾವೆಗಳನ್ನು ಅರ್ಜಿದಾರರು ಒದಗಿಸಲು ವಿಫಲರಾದರು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
1949ರ ಭೋಪಾಲ್ ವಿಲೀನ ಒಪ್ಪಂದದಲ್ಲಿ ಈ ಭೂಮಿಯನ್ನು ನವಾಬ ಪಟೌಡಿ ಕುಟುಂಬದ ವೈಯಕ್ತಿಕ ಆಸ್ತಿ ಎಂದು ಉಲ್ಲೇಖಿಸಿರುವ ದಾಖಲೆಗಳನ್ನು ನ್ಯಾಯಾಲಯ ಮಹತ್ವಪೂರ್ಣವಾಗಿ ಪರಿಗಣಿಸಿದೆ. ಅಲ್ಲದೆ, ಕುಟುಂಬ ವಿಭಜನೆಯ ನಂತರ 1998ರಲ್ಲಿ ಈ ಭೂಮಿಯ ಒಂದು ಭಾಗವನ್ನು ಬಿಲ್ಡರ್‌ಗೆ ಮಾರಾಟ ಮಾಡಲಾಗಿದೆ ಎಂಬ ದಾಖಲೆಗಳನ್ನೂ ಉಲ್ಲೇಖಿಸಲಾಗಿದೆ.
ಈ ತೀರ್ಪಿನಿಂದ ಸೈಫ್ ಅಲಿ ಖಾನ್ ಕುಟುಂಬಕ್ಕೆ ದೊಡ್ಡ ರಿಲೀಫ್ ಸಿಕ್ಕಿದ್ದು, ಭೋಪಾಲ್ ರಾಜಮನೆತನದ ಆಸ್ತಿ ವಿವಾದಗಳಲ್ಲಿ ಇದು ಪ್ರಮುಖ ಪೂರ್ವನಿದರ್ಶನವಾಗಲಿದೆ.

