ಹೊಸದಿಗಂತ ಡಿಜಿಟಲ್ ಡೆಸ್ಕ್:
ವಡೋದರದಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆದ್ದು ಬೀಗಿದರೂ, ಸರಣಿ ಆರಂಭದಲ್ಲೇ ದೊಡ್ಡ ಆಘಾತ ಎದುರಾಗಿದೆ. ಹೌದು! ತಂಡದ ಪ್ರಮುಖ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದ ಕಾರಣದಿಂದ ಇಡೀ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಹಾಗೂ ಬೌಲಿಂಗ್ ವೇಳೆ ಅಸಹಜ ನೋವು ಅನುಭವಿಸಿದ ವಾಷಿಂಗ್ಟನ್ ಸುಂದರ್, ಓವರ್ ಮಧ್ಯದಲ್ಲೇ ಮೈದಾನ ಬಿಟ್ಟಿದ್ದರು. ಆದರೂ ನಂತರ ಬ್ಯಾಟಿಂಗ್‌ಗೆ ಬಂದಿದ್ದರು. ಪಂದ್ಯದ ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಗಳಲ್ಲಿ ಅವರ ಪೆಕ್ಕೆಲುಬಿನಲ್ಲಿ ಗಂಭೀರ ಗಾಯವಾಗಿರುವುದು ಪತ್ತೆಯಾಗಿದೆ.
ವೈದ್ಯರ ಸಲಹೆಯಂತೆ ಸುಂದರ್ ವಿಶ್ರಾಂತಿ ಪಡೆಯಬೇಕಿರುವುದರಿಂದ, ರಾಜ್‌ಕೋಟ್ ಮತ್ತು ಇಂದೋರ್‌ನಲ್ಲಿ ನಡೆಯಲಿರುವ ಉಳಿದ ಎರಡು ಏಕದಿನ ಪಂದ್ಯಗಳಿಗೆ ಅವರು ಲಭ್ಯರಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.
ಇದಕ್ಕೂ ಮುನ್ನ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಕೂಡ ಪಾರ್ಶ್ವ ಸ್ನಾಯು ಗಾಯದಿಂದ ಸರಣಿಯಿಂದ ಹೊರಗುಳಿದಿದ್ದರು. ಅವರ ಬದಲಿಗೆ ಧ್ರುವ್ ಜುರೆಲ್ ತಂಡಕ್ಕೆ ಸೇರಿದ್ದರು. ಇದೀಗ ಮತ್ತೊಮ್ಮೆ ಗಾಯದ ಸಮಸ್ಯೆ ಎದುರಾದ ಹಿನ್ನೆಲೆ, ತಂಡದ ಸಮತೋಲನಕ್ಕೆ ಸವಾಲು ಎದುರಾಗಿದೆ.
ವಾಷಿಂಗ್ಟನ್ ಸುಂದರ್ ಹೊರಬಿದ್ದಿರುವುದರಿಂದ, ಮುಂದಿನ ಪಂದ್ಯಗಳಿಗೆ ಹೊಸ ಆಲ್‌ರೌಂಡರ್‌ಗೆ ಅವಕಾಶ ನೀಡುವ ಕುರಿತು ತಂಡದ ನಿರ್ವಹಣಾ ಬಳಗ ಚಿಂತನೆ ನಡೆಸುತ್ತಿದೆ. ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳುವುದು ಈಗ ಟೀಮ್ ಇಂಡಿಯಾದ ಪ್ರಮುಖ ಗುರಿಯಾಗಿದೆ.

