ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ನಾಯಕ ಕೆ. ಅಣ್ಣಾಮಲೈ, ತಮ್ಮ ವಿರುದ್ಧ ಮಾಡಿದ ವ್ಯಂಗ್ಯ ಮತ್ತು ಬೆದರಿಕೆಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ರೈತನ ಮಗನಾಗಿರುವುದೇ ತನ್ನ ದೊಡ್ಡ ಶಕ್ತಿ ಎಂದು ಹೇಳಿದ ಅವರು, ರಾಜಕೀಯ ಬೆದರಿಕೆಗಳಿಗೆ ತಾನು ಎಂದಿಗೂ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಬೈನಲ್ಲಿ ನಡೆದ ಎಂಎನ್‌ಎಸ್–ಶಿವಸೇನಾ (ಯುಬಿಟಿ) ಸಂಯುಕ್ತ ರ‍್ಯಾಲಿಯಲ್ಲಿ ರಾಜ್ ಠಾಕ್ರೆ ಮಾಡಿದ ಅಪಹಾಸ್ಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನನ್ನು ಬೆದರಿಸಲು ರಾಜ್ ಠಾಕ್ರೆ ಅಥವಾ ಆದಿತ್ಯ ಠಾಕ್ರೆ ಯಾರು? ನಾನು ಬೆದರಿಕೆಗಳಿಗೆ ಭಯಪಡುವ ವ್ಯಕ್ತಿ ಅಲ್ಲ” ಎಂದು ಅಣ್ಣಾಮಲೈ ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈಗೆ ಬಂದರೆ ಕಾಲು ಕತ್ತರಿಸುವುದಾಗಿ ಹಾಕಿರುವ ಪೋಸ್ಟ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾನು ಮುಂಬೈಗೆ ಬರುತ್ತೇನೆ. ಧೈರ್ಯವಿದ್ದರೆ ಕತ್ತರಿಸಿ ನೋಡಿ” ಎಂದು ಸವಾಲು ಹಾಕಿದ್ದಾರೆ.
ಮರಾಠಿ ಜನರನ್ನು ಅವಮಾನಿಸಿದ್ದೇನೆ ಎಂಬ ಆರೋಪಗಳನ್ನು ಅವರು ತಳ್ಳಿ ಹಾಕಿದ್ದು, ಮುಂಬೈ ವಿಶ್ವದರ್ಜೆಯ ನಗರ ಎಂದು ಹೇಳುವುದು ಅವಮಾನವೇ ಎಂದು ಪ್ರಶ್ನಿಸಿದ್ದಾರೆ. ಮುಂಬೈನ ಅಭಿವೃದ್ಧಿಯಲ್ಲಿ ಮರಾಠಿ ಜನರ ಪಾತ್ರ ಅಪಾರ ಎಂದು ಒಪ್ಪಿಕೊಂಡ ಅಣ್ಣಾಮಲೈ, ತಮ್ಮ ವಿರುದ್ಧ ಟೀಕೆ ಮಾಡುವವರನ್ನು ಅಜ್ಞಾನಿಗಳು ಎಂದು ಕರೆದರು.
ಇದೇ ವೇಳೆ, ತಮ್ಮ ವಿರುದ್ಧದ ಅವಮಾನಗಳು ತಮಿಳು ಸಮುದಾಯವನ್ನೂ ಗುರಿಯಾಗಿಸುತ್ತಿವೆ ಎಂದು ಆರೋಪಿಸಿದರು. ಧೋತಿ, ಲುಂಗಿ ಕುರಿತ ಟೀಕೆಗಳ ಮೂಲಕ ತಮಿಳರನ್ನು ಅವಮಾನಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಕೈ, ಕಾಲು ಕತ್ತರಿಸುವ ಬೆದರಿಕೆಗಳಿಗೆ ತಾನು ಹೆದರುವುದಿಲ್ಲ ಎಂಬುದನ್ನು ಪುನರುಚ್ಚರಿಸಿ, ರಾಜಕೀಯ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.



