ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾಗೆ ಅನಿರೀಕ್ಷಿತ ಬದಲಾವಣೆ ಎದುರಾಗಿದೆ. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಯುವ ಪ್ರತಿಭೆ ಆಯುಷ್ ಬದೋನಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಬದೋನಿಗೆ ಮೊದಲ ಬಾರಿಗೆ ಭಾರತ ಏಕದಿನ ತಂಡದಲ್ಲಿ ಸ್ಥಾನ ಸಿಕ್ಕಿದೆ.
ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ವಾಷಿಂಗ್ಟನ್ ಸುಂದರ್ ಅವರಿಗೆ ಪೆಕ್ಕೆಲುಬಿನ ಭಾಗದಲ್ಲಿ ಗಾಯವಾಗಿತ್ತು. ವೈದ್ಯಕೀಯ ಸಲಹೆಯಂತೆ ಅವರಿಗೆ ವಿಶ್ರಾಂತಿ ಅಗತ್ಯವಿರುವುದರಿಂದ ನ್ಯೂಜಿಲೆಂಡ್ ವಿರುದ್ಧದ ಉಳಿದ ಎರಡು ಪಂದ್ಯಗಳಿಗೆ ಅವರು ಲಭ್ಯರಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಸುಂದರ್ ಸ್ಥಾನಕ್ಕೆ ಆಯ್ಕೆಯಾಗಿರುವ ದೆಹಲಿ ಮೂಲದ ಆಯುಷ್ ಬದೋನಿ, ರಾಜ್‌ಕೋಟ್ ಮತ್ತು ಇಂದೋರ್‌ನಲ್ಲಿ ನಡೆಯಲಿರುವ ಮುಂದಿನ ಎರಡು ಏಕದಿನ ಪಂದ್ಯಗಳಿಗೆ ಟೀಮ್ ಇಂಡಿಯಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಮೊದಲ ಅವಕಾಶವಾಗಿದ್ದು, ದೇಶೀಯ ಮತ್ತು ಐಪಿಎಲ್ ಪ್ರದರ್ಶನದ ಫಲವಾಗಿ ಈ ಗೌರವ ಸಿಕ್ಕಿದೆ.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಬದೋನಿ 27 ಪಂದ್ಯಗಳಲ್ಲಿ 693 ರನ್ ಗಳಿಸಿದ್ದು, ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಜೊತೆಗೆ 18 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 56 ಪಂದ್ಯಗಳಲ್ಲಿ 963 ರನ್ ಗಳಿಸಿ ಗಮನ ಸೆಳೆದಿದ್ದಾರೆ.



