ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಆಫೀಸ್ ಬದಲಾಗುತ್ತಿದೆ. 1947ರಲ್ಲಿ ಭಾರತ ಸ್ವಾತಂತ್ರ್ಯ ಸಿಕ್ಕ ಬಳಿಕ ಭಾರತ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಸೇವೆ ಸಲ್ಲಿಸಿದ ಅದೇ ಕಚೇರಿಯಲ್ಲೇ ನಂತರದ ಎಲ್ಲಾ ಪ್ರಧಾನಿಗಳು ಕಾರ್ಯನಿರ್ವಹಿಸಿದ್ದಾರೆ. ಮೂರನೇ ಬಾರಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕೂಡ ಇದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತದ ಪ್ರಧಾನಿಗಳ ಕಚೇರಿ ವಿಳಾಸ ಇದುವರೆಗೂ ಬದಲಾಗಿಲ್ಲ. ಸೌತ್ ಬ್ಲಾಕ್, ದೆಹಲಿ ಎಂದರೆ ಸಾಕು, ಅದು ಪ್ರಧಾನಿಗಳ ಕಚೇರಿ ಅನ್ನೋದು ಎಲ್ಲರ ಮನದಲ್ಲಿ ಅಚ್ಚೊತ್ತಿದೆ. ಆದರೆ ಇದೀಗ ಪ್ರಧಾನಿ ಮೋದಿ ಸೌತ್ ಬ್ಲಾಕ್ ದೆಹಲಿ ವಿಳಾಸ ಬದಲಿಸುತ್ತಿದ್ದಾರೆ. ಮೋದಿ ಹೊಸ ಕಚೇರಿ ಹೊಸ ಸಂಸತ್ತಿನ ಕಟ್ಟಡಲ್ಲಿದೆ.
ಸೆಂಟ್ರಲ್ ವಿಸ್ತಾ ಯೋಜನೆಯಡಿ ನಿರ್ಮಾಣಗೊಂಡಿರುವ ಹೊಸ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಕಚೇರಿ ಸ್ಥಳಾಂತರಗೊಳ್ಳುತ್ತಿದೆ. ಪ್ರಧಾನಿಗಳ ಕಚೇರಿ ಹೆಸರು ಸೇವಾ ತೀರ್ಥ 1. ಅಧಿವೇಶನ ಸೇರಿದಂತೆ ಹಲವು ಕಚೇರಿಗಳು ಸ್ಥಳಾಂತರಗೊಂಡಿದೆ. ಇದೀಗ ಮಕರ ಸಂಕ್ರಾಂತಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸೌತ್ ಬ್ಲಾಕ್‌ನಿಂದ ಸೇವಾ ತೀರ್ಥ 1 ಕಚೇರಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಮೂರು ಕಚೇರಿಗಳು ಸ್ಥಳಾಂತರ
ಪ್ರಧಾನಿ ಮೋದಿ ಕಚೇರಿ ಮಾತ್ರವಲ್ಲ, ಇದರ ಜೊತೆಗೆ ಸೆಂಟ್ರಲ್ ವಿಸ್ತಾ ಕಟ್ಟಡದಕ್ಕೆ ಇನ್ನೆರಡು ಕಚೇರಿ ಸ್ಥಳಾಂತರಗೊಳ್ಳುತ್ತಿದೆ. ಕ್ಯಾಬಿನೆಟ್ ಕಾರ್ಯದರ್ಶಿ ಹಾಗೂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಸೆಕ್ರಟರಿಯೇಟ್ ಕಟ್ಟಡಗಳು ಸ್ಥಳಾಂತಗೊಳ್ಳುತ್ತಿದೆ. ಮೂರು ಕಚೇರಿಗಳು ಪ್ರತ್ಯೇಕ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಸೇವಾ ತೀರ್ಥ 1, ಸೇವಾ ತೀರ್ಥ 2 ಹಾಗೂ ಸೇವಾ ತೀರ್ಥ 3 ವಿಳಾಸದಲ್ಲಿ ಈ ಮೂರು ಕಚೇರಿಗಳು ಇರಲಿದೆ.
ಪ್ರಧಾನಿ ಮೋದಿ ಸೇರಿದಂತೆ ಮೂರು ಕಚೇರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಹಳೇ ಸಂಸತ್ತು ಹಾಗೂ ಇಡೀ ಕಟ್ಟಡವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತದೆ. ಇದಕ್ಕೆ ಫ್ರಾನ್ಸ್‌ನ ಮ್ಯೂಸಿಯಂ ಡೆವಲಪ್‌ಮೆಂಟ್ ಎಜೆನ್ಸಿ ನೆರವು ಪಡೆಯಲಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ದರ್ಜೆಯ ಮ್ಯೂಸಿಯಂ ಆಗಿ ಪರಿವರ್ತನೆಗೊಳ್ಳಲಿದೆ.
ಪ್ರಧಾನಿ ಮೋದಿ ಸೇರಿದಂತೆ ಮೂರು ಸೇವಾ ತೀರ್ಥ ಕಚೇರಿಗಳಿರುವ ಕಟ್ಟಡವನ್ನು ಎಕ್ಸಿಕ್ಯೂಟೀವ್ ಎನ್‌ಕ್ಲೇವ್ ಎಂದು ಕರೆಯಲಾಗುತ್ತದೆ. ಈ ಕಚೇರಿಗಳ ನಿರ್ಮಾಣಕ್ಕೆ ಬರೋಬ್ಬರಿ 1,189 ಕೋಟಿ ರೂಪಾಯಿ ವೆಚ್ಚವಾಗಿದೆ. ಬ್ರಿಟಿಷ್ ವಸಾಹತುಶಾಹಿ ಮನೋಭಾವದಿಂದ ಸಂಪೂರ್ಣವಾಗಿ ಹೊರಬರಲು ಎಲ್ಲಾ ಪ್ರಯತ್ನಗಳನ್ನು ಮೋದಿ ಸರ್ಕಾರ ಮಾಡುತ್ತಿದೆ. ಇದರ ಭಾಗವಾಗಿ ಹೆಸರಿನಿಂದ ಹಿಡಿದು ವಿಳಾಸದ ವರೆಗೂ ಎಲ್ಲವೂ ಬದಲಾಗುತ್ತಿದೆ.


