ಹೊಸದಿಗಂತ ಧಾರವಾಡ:
ನಗರದ ಕಮಲಾಪುರದ 4ನೇ ನಂಬರ್ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಇಬ್ಬರು ಮಾಸೂಮರನ್ನು ದ್ವಿಚಕ್ರ ವಾಹನದಲ್ಲಿ ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ 3ನೇ ತರಗತಿಯ ವಿದ್ಯಾರ್ಥಿಗಳಾದ ಲಕ್ಷ್ಮಿ ಕರಿಯಪ್ಪನವರ ಮತ್ತು ತನ್ವೀರ್ ದೊಡ್ಡಮನಿ ಎಂಬುವವರನ್ನು ಅಬ್ದುಲ್ ಕರಿಮ್ ಮೇಸ್ತ್ರಿ ಎಂಬ ವ್ಯಕ್ತಿ ಬೈಕ್‌ನಲ್ಲಿ ಅಪಹರಿಸಿಕೊಂಡು ಪರಾರಿಯಾಗಿದ್ದನು. ಈ ದೃಶ್ಯವು ಶಾಲೆಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮಕ್ಕಳನ್ನು ಹೊತ್ತು ಜೋಯ್ಡಾದ ಕಡೆಗೆ ವೇಗವಾಗಿ ತೆರಳುತ್ತಿದ್ದ ಆರೋಪಿಯ ಬೈಕ್ ಮಾರ್ಗಮಧ್ಯೆ ಅಪಘಾತಕ್ಕೀಡಾಗಿದೆ. ಗಾಯಗೊಂಡಿದ್ದ ಮಕ್ಕಳನ್ನು ಕಂಡು ಸಂಶಯಗೊಂಡ ಸ್ಥಳೀಯರು ವಿಚಾರಿಸಿದಾಗ, ತಾವು ಧಾರವಾಡದವರು ಎಂಬ ವಿಷಯವನ್ನು ಮಕ್ಕಳು ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಧಾರವಾಡ ಉಪನಗರ ಮತ್ತು ಜೋಯ್ಡಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆರೋಪಿ ಅಬ್ದುಲ್ ಕರಿಮ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪಘಾತದಲ್ಲಿ ಗಾಯಗೊಂಡ ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸದ್ಯ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


