ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ತೀವ್ರಗೊಂಡಿದ್ದು, ಇರಾನ್‌ನ ಒಳರಾಜಕೀಯ ಅಶಾಂತಿ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲವು ವಾರಗಳಿಂದ ಇರಾನ್‌ನ ಹಲವು ನಗರಗಳಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿರುವ ಸೂಚನೆಗಳು ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರವು ತನ್ನ ನಾಗರಿಕರಿಗೆ ತಕ್ಷಣ ಇರಾನ್ ತೊರೆಯುವಂತೆ ತುರ್ತು ಭದ್ರತಾ ಎಚ್ಚರಿಕೆ ಹೊರಡಿಸಿದೆ.
ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಭದ್ರತಾ ಪಡೆಗಳ ದಮನದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರನ್ನು ಬಂಧಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಈ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇರಾನ್ ಆಡಳಿತದ ಮೇಲೆ ಒತ್ತಡ ಹೆಚ್ಚಿಸಿದೆ.
ವಿಶೇಷವಾಗಿ ದ್ವಿ ಪೌರತ್ವ ಹೊಂದಿರುವ ಅಮೆರಿಕನ್ ನಾಗರಿಕರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ವಾಷಿಂಗ್ಟನ್ ಎಚ್ಚರಿಸಿದೆ. ಇರಾನ್ ಸರ್ಕಾರವು ದ್ವಿ ಪೌರತ್ವವನ್ನು ಮಾನ್ಯ ಮಾಡುವುದಿಲ್ಲವಾದ್ದರಿಂದ, ಬಂಧನವಾದರೆ ಅಮೆರಿಕದ ನೆರವು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಇದೀಗ ಇರಾನ್‌ನಲ್ಲಿ ರಾಷ್ಟ್ರವ್ಯಾಪಿ ಇಂಟರ್ನೆಟ್ ಸ್ಥಗಿತ ಜಾರಿಯಲ್ಲಿದ್ದು, ಮೊಬೈಲ್ ಸಂಪರ್ಕ ಹಾಗೂ ಸಾಮಾಜಿಕ ಜಾಲತಾಣಗಳು ಸ್ಥಗಿತಗೊಂಡಿವೆ. ಇದರಿಂದ ಜನರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಳ್ಳುವಂತಾಗಿದೆ. ಜೊತೆಗೆ ಟೆಹ್ರಾನ್‌ನ ಪ್ರಮುಖ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಲುಫ್ತ್ಹಾನ್ಸಾ, ಎಮಿರೇಟ್ಸ್ ಮತ್ತು ಕತಾರ್ ಏರ್‌ವೇಸ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಇರಾನ್ ಅಮೆರಿಕ ನಾಗರಿಕರಿಗೆ ಹಾನಿ ಮಾಡಿದರೆ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಟ್ರಂಪ್ ಆಡಳಿತ ತಳ್ಳಿ ಹಾಕಿಲ್ಲ. ಇರಾನ್‌ನಲ್ಲಿನ ಆಂತರಿಕ ಅಶಾಂತಿ ಈಗ ಜಾಗತಿಕ ಬಿಕ್ಕಟ್ಟಾಗಿ ಮಾರ್ಪಡುವ ಲಕ್ಷಣಗಳನ್ನು ತೋರುತ್ತಿದ್ದು, ಮುಂದಿನ ದಿನಗಳು ಮಧ್ಯಪ್ರಾಚ್ಯಕ್ಕೆ ಮಹತ್ವದ ನಿರ್ಣಾಯಕವಾಗುವ ಸಾಧ್ಯತೆ ಇದೆ.


