ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವ ಐಟಿ ಉದ್ಯೋಗಿ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ತಮಿಳು ನಟಿ ಲಕ್ಷ್ಮಿ ಮೆನನ್ ಅವರ ಹೆಸರು ಕೇಳಿ ಬಂದಿದೆ.
ಕೊಚ್ಚಿಯ ಬಾರ್‌ವೊಂದರಲ್ಲಿ ನಡೆದ ವಾಗ್ವಾದದ ಅನಂತರ ಯುವ ಐಟಿ ಉದ್ಯೋಗಿಯನ್ನು ಅಪಹರಿಸಿ ಥಳಿಸಲಾಗಿತ್ತು. ಈ ಘಟನೆಯಲ್ಲಿ ನಟಿ ಲಕ್ಷ್ಮಿ ಮೆನನ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಮಲಯಾಳಂ ಸಿನಿಮಾದಲ್ಲಿಯೂ ಹೆಸರುವಾಸಿಯಾಗಿರುವ ನಟಿ, ಅಪಹರಣಕಾರರ ಕಾರಿನಲ್ಲಿದ್ದರು ಎಂದು ಆರೋಪಿಸಲಾಗಿದೆ. ಲಕ್ಷ್ಮಿ ಮತ್ತು ಇತರ ಕೆಲವರು ಕಾರನ್ನು ತಡೆದು ಜಗಳವಾಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕಳೆದ ಭಾನುವಾರ ರಾತ್ರಿ ನಡೆದಿರುವ ಈ ಘಟನೆಗೆ ಸಂಬಂಧಿಸಿ ಉತ್ತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅವರಲ್ಲಿ ಒಬ್ಬ ನಟಿಯ ಸ್ನೇಹಿತ ಎಂದು ಗುರುತಿಸಲಾಗಿದೆ. ಬ್ಯಾನರ್ಜಿ ರಸ್ತೆಯ ಬಾರ್‌ನಲ್ಲಿ ಆರೋಪಿಗಳು ಮತ್ತು ಐಟಿ ಯುವಕನ ಮಧ್ಯೆ ವಾಗ್ವಾದ ನಡೆದಿತ್ತು. ಅನಂತರ ಆರೋಪಿಯು ತನ್ನ ಕಾರಿನಲ್ಲಿ ಹಿಂತಿರುಗುತ್ತಿದ್ದ ಯುವ ಐಟಿ ಉದ್ಯೋಗಿಯನ್ನು ಉತ್ತರ ಸೇತುವೆ ಬಳಿ ತಡೆದು ನಿಲ್ಲಿಸಿದ್ದಾರೆ. ಬಳಿಕ ಆತನನ್ನು ತಮ್ಮ ಕಾರಿನೊಳಗೆ ಎಳೆದೊಯ್ದು ಬೇರೊಂದು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಥಳಿಸಲಾಗಿತ್ತು.