ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ 25ರಿಂದ ಅರ್ಹ ಮಹಿಳೆಯರಿಗೆ ಮಾಸಿಕ 2,100 ರೂ. ಆರ್ಥಿಕ ನೆರವು ನೀಡುವ ದೀನ್ ದಯಾಳ್ ಲಾಡೋ ಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ತಿಳಿಸಿದ್ದಾರೆ.
ಹರಿಯಾಣ ಕ್ಯಾಬಿನೆಟ್ ಸಭೆಯ ಬಳಿಕ ಸೈನಿ ಈ ಘೋಷಣೆ ಮಾಡಿದ್ದು, ದೀನ್ ದಯಾಳ್ ಲಾಡೋ ಲಕ್ಷ್ಮಿ ಯೋಜನೆ ಜಾರಿಗೆ ತರಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸೆಪ್ಟೆಂಬರ್ 25ರಂದು ದೀನ್ದಯಾಳ್ ಉಪಾದ್ಯಾಯರ ಜನ್ಮ ಜಯಂತಿಯಂದು ಈ ಯೋಜನೆ ಜಾರಿಗೆ ತರಲಾಗುವುದು ಎಂದರು.
ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ಆರ್ಥಿಕ ಸಹಾಯವಾಗಿ 2,100ರೂ ನೀಡಲಾಗುವುದು. 23 ವರ್ಷ ಮೇಲ್ಪಟ್ಟ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ವಿವಾಹಿತ ಅಥವಾ ಅವಿವಾಹಿತ ಎರಡು ವರ್ಗದ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.
ಮೊದಲ ಹಂತದ ಯೋಜನೆಯಲ್ಲಿ 1 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನ ಇರುವ ಕುಟುಂಬವನ್ನು ಸೇರಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 19 ರಿಂದ 20 ಲಕ್ಷ ಮಹಿಳೆಯರಿಗೆ ಯೋಜನೆಯ ಲಾಭ ಸಿಗಲಿದೆ. ಬರುವ ದಿನಗಳಲ್ಲಿ ಈ ಯೋಜನೆಯನ್ನು ಇನ್ನು ಹೆಚ್ಚಿನ ಆದಾಯದ ವರ್ಗಗಳನ್ನು ಸೇರಿಸಿ ವಿಸ್ತರಣೆ ಮಾಡಲಾಗುವುದು ಎಂದರು.
ಈ ಯೋಜನೆ ಲಾಭ ಪಡೆಯಲು ಅವಿವಾಹಿತ ಮಹಿಳೆ ಅಥವಾ ಅವಳು ವಿವಾಹಿತಳಾಗಿದ್ದರೆ ಆಕೆಯ ಪತಿ 15 ವರ್ಷಗಳ ಕಾಲ ಹರಿಯಾಣದಲ್ಲಿ ನೆಲೆಸಿರಬೇಕು. ಒಂದು ಕುಟುಂಬದಲ್ಲಿ ಎಷ್ಟು ಮಹಿಳೆಯರು ಬೇಕಾದರೂ ಯೋಜನೆ ಲಾಭ ಪಡೆಯಬಹುದು. ಒಂದು ವೇಳೆ ಮನೆಯಲ್ಲಿ ಮೂವರು ಅರ್ಹ ಮಹಿಳೆಯರಿದ್ದರೆ, ಆ ಮೂವರು ಯೋಜನೆ ಲಾಭ ಪಡೆಯಬಹುದು ಎಂದು ಸೈನಿ ತಿಳಿಸಿದ್ದಾರೆ.
ಯೋಜನೆ ಲಾಭ ಪಡೆಯುವ ಅವಿವಾಹಿತ ಮಹಿಳೆಯ ವಯಸ್ಸು 45 ವರ್ಷ ದಾಟಿದ್ದರೆ, ಅವರು ಸರ್ಕಾರದ ವಿಧವಾ ಮತ್ತು ನಿರ್ಗತಿಕ ಮಹಿಳಾ ಆರ್ಥಿಕ ಸಹಾಯ ಯೋಜನೆಗೆ ಸ್ವಯಂಚಾಲಿತವಾಗಿ ಅರ್ಹರಾಗುತ್ತಾರೆ. ವಿವಾಹಿತ ಮಹಿಳೆ ವಯಸ್ಸು 60 ಆಗಿದ್ದರೆ, ಅವರು ವೃದ್ಧಾಪ್ಯ ಸಮ್ಮಾನ್ ಭತ್ಯೆ ಪಿಂಚಣಿ ಯೋಜನೆಗೆ ಅರ್ಹರಾಗುತ್ತಾರೆ.