ಪಾವ್ ಭಾಜಿ ಎಂಬ ಖಾದ್ಯವು ಇಂದಿನ ದಿನಗಳಲ್ಲಿ ಭಾರತದ ಪ್ರತಿಯೊಂದು ಊರಲ್ಲಿಯೂ ಕಂಡುಬರುವ ಜನಪ್ರಿಯ ತಿಂಡಿಯಾಗಿದೆ. ವಿಶೇಷವಾಗಿ ಮುಂಬೈ ಬೀದಿಗಳಲ್ಲಿ ಇದರ ಬೇಡಿಕೆ ಹೆಚ್ಚು. ತಂಪಾದ ಹವಾಮಾನದಲ್ಲಿ ಅಥವಾ ಮಳೆ ಸುರಿಯುವ ಸಂಜೆ ಸಮಯದಲ್ಲಿ ಬಿಸಿ ಬಿಸಿ ಪಾವ್ ಭಾಜಿಯನ್ನು ತಿನ್ನುವುದೇ ಒಂದು ಸುಂದರ ಅನುಭವ.
ಬೇಕಾಗುವ ಸಾಮಗ್ರಿಗಳು
ಬನ್ಸ್ – 2
ಬೆಣ್ಣೆ – ½ ಕಪ್
ಎಣ್ಣೆ – 2 ಚಮಚ
ಈರುಳ್ಳಿ (ಕತ್ತರಿಸಿದ) – ¼ ಕಪ್
ಕ್ಯಾಪ್ಸಿಕಂ (ಕತ್ತರಿಸಿದ) – ¼ ಕಪ್
ಹಸಿರು ಬಟಾಣಿ – ¼ ಕಪ್
ಟೊಮೆಟೊ ಹೋಳುಗಳು – ½ ಕಪ್
ಆಲೂಗಡ್ಡೆ (ದೊಡ್ಡ ಗಾತ್ರದ) – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕಸೂರಿ ಮೇಥಿ – 1 ಟೀಸ್ಪೂನ್
ಪಾವ್ ಭಾಜಿ ಮಸಾಲ ಪುಡಿ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕಾಶ್ಮೀರಿ ಮೆಣಸಿನ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ನಿಂಬೆ – 1
ತಯಾರಿಸುವ ವಿಧಾನ
ಮೊದಲಿಗೆ ಈರುಳ್ಳಿ, ಕ್ಯಾಪ್ಸಿಕಂ ಹಾಗೂ ಟೊಮೆಟೊಗಳನ್ನು ತೆಳುವಾಗಿ ಕತ್ತರಿಸಿ ಪಕ್ಕಕ್ಕೆ ಇಡಿ. ಆಲೂಗಡ್ಡೆಯನ್ನು ಬೇಯಿಸಿ ಹೋಳುಗಳಾಗಿ ಕತ್ತರಿಸಿ ಇಡಿ. ನಂತರ ಪಾತ್ರೆಯಲ್ಲಿ ಎಣ್ಣೆ ಹಾಗೂ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಈರುಳ್ಳಿ, ಕ್ಯಾಪ್ಸಿಕಂ ಹಾಗೂ ಬಟಾಣಿಗಳನ್ನು ಸೇರಿಸಿ ಕೆಲವು ನಿಮಿಷ ಹುರಿಯಿರಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿದು, ಟೊಮೆಟೊ ತುಂಡುಗಳನ್ನು ಸೇರಿಸಿ ಬೇಯಿಸಬೇಕು.
ಮಿಶ್ರಣ ಬೆಂದ ಬಳಿಕ ಉಪ್ಪು, ಪಾವ್ ಭಾಜಿ ಮಸಾಲ, ಕಸೂರಿ ಮೇಥಿ ಮತ್ತು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಬೇಯಿಸಿದ ಆಲೂಗಡ್ಡೆ ಸೇರಿಸಿ ಮ್ಯಾಶರ್ ಬಳಸಿ ಮ್ಯಾಶ್ ಮಾಡಬೇಕು. ಇದಕ್ಕೆ ನೀರು ಸೇರಿಸಿ ಭಾಜಿ ಮಂದವಾಗುವವರೆಗೆ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ಬೆಣ್ಣೆ ಸೇರಿಸಿ ಸಿದ್ಧಪಡಿಸಬೇಕು.
ಪಾವ್‌ಗಳನ್ನು ಬೆಣ್ಣೆ ಹಾಗೂ ಸ್ವಲ್ಪ ಪಾವ್ ಭಾಜಿ ಮಸಾಲದಲ್ಲಿ ಹುರಿದುಕೊಳ್ಳಬೇಕು. ನಂತರ ಬಿಸಿ ಭಾಜಿ ಜೊತೆಗೆ ಪಾವ್‌ಗಳನ್ನು ನಿಂಬೆ ತುಂಡು ಹಾಗೂ ಈರುಳ್ಳಿ ಜೊತೆಗೆ ಸವಿಯಬಹುದು.