ಭಾರತೀಯ ಅಡುಗೆ ಮನೆಯಲ್ಲಿ ಬೇಳೆ ಒಂದು ಅವಿಭಾಜ್ಯ ಅಂಗವಾಗಿದೆ. ದಿನನಿತ್ಯ ತಯಾರಿಸುವ ಸಾರು, ಪಲ್ಯ, ಕೂಟು ಮುಂತಾದ ಖಾದ್ಯಗಳಲ್ಲಿ ಬೇಳೆ ಬಳಸಲಾಗುತ್ತದೆ. ಆದರೆ ಹಲವಾರು ಬಾರಿ ಎಷ್ಟೇ ಸೀಟಿ ಹಾಕಿದರು ಬೇಳೆ ಸರಿಯಾಗಿ ಬೇಯುವುದೇ ಇಲ್ಲ. ಇಂತಹ ಸಂದರ್ಭಗಳಲ್ಲಿ ಅಡುಗೆಗೆ ಹೆಚ್ಚು ಸಮಯ ತೆಗೆದುಕೊಳ್ಳುವುದು ಸಹಜ. ತಜ್ಞರ ಪ್ರಕಾರ ಬೇಳೆ ಸರಿಯಾಗಿ ಬೇಯದಿರಲು ಹಲವು ಕಾರಣಗಳಿವೇ, ಅವುಗಳನ್ನು ಗಮನಿಸಿದರೆ ಸುಲಭವಾಗಿ ಬೇಳೆಯನ್ನು ಮೃದುವಾಗಿ ಮತ್ತು ರುಚಿಯಾಗಿ ಬೇಯಿಸಬಹುದು.
ಅಡುಗೆ ಮಾಡುವ ಮೊದಲು ಮಸೂರ ಬೇಳೆಯನ್ನು ಕನಿಷ್ಠ 30 ರಿಂದ 40 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡುವುದು ಮುಖ್ಯ. ಇದರಿಂದ ಬೇಳೆ ಮೃದುಗೊಳ್ಳುತ್ತದೆ ಮತ್ತು ಬೇಗನೆ ಬೇಯುತ್ತದೆ.
ಕುಕ್ಕರ್ ಬಳಕೆ ಮಾಡುವಾಗ ಮುಚ್ಚಳ ಮತ್ತು ಸೀಟಿ ಸರಿಯಾಗಿ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕೆಲವೊಮ್ಮೆ ಒತ್ತಡ ಸರಿಯಾಗಿ ಹೆಚ್ಚಾಗದೇ ಇದ್ದರೆ ಬೇಳೆ ಬೇಯುವುದಿಲ್ಲ.
ತಣ್ಣೀರಿನ ಬದಲಿಗೆ ಬಿಸಿನೀರನ್ನು ಬಳಸುವುದು ಹಾಗೂ ಅಗತ್ಯವಿದ್ದಲ್ಲಿ ಒಂದು ಚಿಟಿಕೆ ಅಡಿಗೆ ಸೋಡಾ ಸೇರಿಸುವುದರಿಂದ ಬೇಳೆ ಬೇಗನೆ ಬೇಯುತ್ತದೆ.
ಅದೇ ರೀತಿ, ಬೇಳೆ ಬೇಯಿಸುವ ವೇಳೆ ಉಪ್ಪನ್ನು ಪ್ರಾರಂಭದಲ್ಲೇ ಸೇರಿಸಬಾರದು. ಉಪ್ಪು ಬೇಳೆಯನ್ನು ಗಟ್ಟಿಯಾಗಿಸುತ್ತದೆ, ಆದ್ದರಿಂದ ಮೊದಲು ಬೇಳೆ ಬೇಯಿಸಿ ಬಳಿಕ ಉಪ್ಪು ಸೇರಿಸುವುದು ಉತ್ತಮ.
ಸ್ವಲ್ಪ ಅರಿಶಿನ ಮತ್ತು ಎಣ್ಣೆ ಸೇರಿಸುವುದರಿಂದ ಬೇಳೆ ಬೇಗನೆ ಬೇಯುವುದಲ್ಲದೆ ರುಚಿಯೂ ಹೆಚ್ಚುತ್ತದೆ.
ಹಳೆಯ ಬೇಳೆಗಳನ್ನು ಬಳಸುವುದನ್ನು ತಪ್ಪಿಸಬೇಕು, ಏಕೆಂದರೆ ಅವು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಮತ್ತು ರುಚಿಯೂ ಕಡಿಮೆಯಾಗಿರುತ್ತದೆ.
ಬೇಳೆ ಸರಿಯಾಗಿ ಬೇಯದಿರುವುದು ಅಡುಗೆಯಲ್ಲಿ ಸಾಮಾನ್ಯ ಸಮಸ್ಯೆಯಾಗಿದ್ದರೂ, ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಸುಲಭವಾಗಿ ಬೇಳೆಯನ್ನು ಬೇಯಿಸಬಹುದು.