ಹೊಸದಿಗಂತ ಡಿಜಿಟಲ್ ಡೆಸ್ಕ್:
ದೂರವಾಣಿ ಸಂಪರ್ಕವಿಲ್ಲದ ಗ್ರಾಮೀಣ ಭಾಗದಿಂದ ಸುಮಾರು ೧೦ ಕಿಲೋಮೀಟರ್ ದೂರದ ಹಳ್ಳಿಯ ಪ್ರತಿಭೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹೆಮ್ಮೆಯಾಗಿ ಹೊರಹೊಮ್ಮಿದ್ದಾಳೆ.
ಹೌದು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆ ದಿ.ನಾಗಪ್ಪ ಎಂ ಎ ಹಾಗೂ ಜಾನಕಿ ದಂಪತಿಗಳ ಹಿರಿಯ ಪುತ್ರಿ ಶುಶ್ಮಿತ ಇದೀಗ ಎಸ್ ಎಸ್ ಸಿ ಜಿ ಡಿ ಪರಿಕ್ಷೆಯಲ್ಲಿ ತೇರ್ಗಡೆಯಾಗಿ ತಾಲೂಕಿಗೆ ಹೆಮ್ಮೆಯಾಗಿದ್ದಾಳೆ. ಈಕೆ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ದೇಶ ಕಾಯುವ ಸೈನಿಕ ವೃತ್ತಿಯ ಕಡೆಗೆ ಆಕರ್ಷಿತಲಾಗಿ ಮುಂದೆ ತನ್ನ ಪೋಷಕರ ಕಷ್ಟಗಳಿಂದ ಪಾರು ಮಾಡಲು ಸತತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಪ್ರಾರಂಭಿಸಿ ಮುಂದೆ ಪೋಲಿಸ್ ಇಲಾಖೆಯ ಎಸೈ , ಕಾನ್ಟೇಬಲ್ , ಮಿಲಿಟರಿ , ಅಗ್ನಿಪತ್ , ಅರಣ್ಯ ರಕ್ಷಕ ಹುದ್ದೆ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದಾಕೆ ಇದೀಗ ಅಂತಿಮವಾಗಿ ತನ್ನ ಆಸೆಯಂತೆಯೇ ಎಸ್ ಎಸ್ ಸಿ ಜಿ ಡಿ ಪರೀಕ್ಷೆ ತೇರ್ಗಡೆಗೊಂಡಿದ್ದಾಳೆ.
ನೆಟ್ವರ್ಕ್ ಇಲ್ಲದ ಗ್ರಾಮೀಣ ಪ್ರತಿಭೆ ಕತೆಯೇ ರೋಚಕ
ಅರಂತೋಡು ನಗರದಿಂದ ಸರಿ ಸುಮಾರು ೧೦ ರಿಂದ ೧೨ ಕಿಲೋ ಮೀಟರ್ ದೂರದ ಕೇವಲ ೨೫ ಕುಟುಂಬ ವಾಸಿಸುವ ಕಾಡಿನ ಮಧ್ಯದಲ್ಲಿನ ಪುಟ್ಟ ಹಳ್ಳಿಯ ಸುಶ್ಮಿತ ತನ್ನ ಹಳ್ಳಿಯಲ್ಲಿನ ಕೊರತೆಗಳ ಮಧ್ಯೆ ಸವಾಲುಗಳನ್ನು ಮೆಟ್ಟಿನಿಂತು ಬೆಳೆದ ಪ್ರತಿಭೆ. ತನ್ನ ವಿಧ್ಯಾಭ್ಯಾಸದ ಸಂದರ್ಭದಲ್ಲಿ ತಂದೆ ನಿಧನರಾದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತು ಗ್ರಾನೈಟ್ ಅಂಗಡಿಯೊಂದರಲ್ಲಿ ಕೆಲಸವನ್ನು ಮಾಡುತ್ತ ಯೂಟ್ಯೂಬ್ , ಪುಸ್ತಕ , ಪತ್ರಿಕೆಗಳ ಓದಿನ ಜೊತೆಗೆ ತನ್ನ ತಂಗಿ ಹಾಗೂ ತಾಯಿಯ ಜೊತೆಗೆ ವಾಸಿಸತೊಡಗಿದರು. ಬಳಿಕದ ದಿನಗಳಲ್ಲಿ ತಂಗಿಯನ್ನು ಉನ್ನತ್ತ ವಿಧ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ತಾಯಿ ಜೊತೆಗೆ ಹೆಗಲು ಕೊಟ್ಟು ಸಹೋದರಿ ನಿಶ್ಮಿತಳನ್ನು ಇಂದು ಶುಶ್ರೂಕಿಯಾಗಿ ಮಾಡುವಲ್ಲಿ ಸಫಲವಾಗಿದ್ದು ಇದೀಗ ಈಕೆಯು ತನ್ನ ಆಸೆಯನ್ನು ಪೂರೈಸಿ ತನ್ನ ತಾಯಿಯ ಆಸೆಯನ್ನು ಪೂರೈಸಿದ್ದಾಳೆ.