ಭಾರತೀಯ ಆಹಾರ ಪದ್ಧತಿಯಲ್ಲಿ ಅನ್ನಕ್ಕೆ ಅಪ್ರತಿಮ ಸ್ಥಾನವಿದೆ. ಬೇಳೆ, ಸಾಂಬಾರ್, ಸೊಪ್ಪು ಅಥವಾ ತುಪ್ಪದೊಂದಿಗೆ ಬಿಸಿ ಅನ್ನ ತಿನ್ನುವುದು ಅನೇಕ ಕುಟುಂಬಗಳ ದಿನನಿತ್ಯದ ಅಭ್ಯಾಸ. ಆದರೆ, “ಪ್ರತಿದಿನ ಅನ್ನ ಸೇವಿಸಿದರೆ ಶುಗರ್ ಹೆಚ್ಚಾಗುತ್ತದೆಯೇ?” ಎಂಬ ಪ್ರಶ್ನೆ ಮಧುಮೇಹಿಗಳನ್ನು ಸೇರಿದಂತೆ ಅನೇಕರಲ್ಲಿ ಆತಂಕ ಮೂಡಿಸಿದೆ. ತಜ್ಞರ ಪ್ರಕಾರ, ಅನ್ನ ಸೇವನೆಯೇ ಮಧುಮೇಹಕ್ಕೆ ನೇರ ಕಾರಣವಲ್ಲ, ಬದಲಿಗೆ ದೈಹಿಕ ಚಟುವಟಿಕೆಯ ಕೊರತೆ, ಜಂಕ್ ಫುಡ್ ಸೇವನೆ ಹಾಗೂ ಅಸಮರ್ಪಕ ಜೀವನಶೈಲಿ ಶುಗರ್ ಏರಿಕೆಗೆ ಪ್ರಮುಖ ಕಾರಣಗಳಾಗುತ್ತವೆ.
ಕೆಲವು ಅಧ್ಯಯನಗಳ ಪ್ರಕಾರ, ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹೆಚ್ಚು ಬಿಳಿ ಅಕ್ಕಿ ತಿನ್ನುವವರಲ್ಲಿ ಮಧುಮೇಹದ ಅಪಾಯ 1.5 ಪಟ್ಟು ಹೆಚ್ಚಾಗಬಹುದು. ಆದಾಗ್ಯೂ, ಕಂದು ಅಕ್ಕಿ, ಕೆಂಪು ಅಕ್ಕಿ ಅಥವಾ ದೇಶೀಯ ಅಕ್ಕಿಯಂತಹ ಹೆಚ್ಚಿನ ಫೈಬರ್ ಹೊಂದಿರುವ ಅಕ್ಕಿಗಳು ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವುದು, ಅವು ಮಧುಮೇಹಿಗಳಿಗೆ ಹೆಚ್ಚು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸರಿಯಾದ ಅಕ್ಕಿಯ ಆಯ್ಕೆ – ಬಿಳಿ ಅಕ್ಕಿಗಿಂತ ಕಂದು ಅಕ್ಕಿ ಅಥವಾ ಕೆಂಪು ಅಕ್ಕಿ ಉತ್ತಮ. ಇವು GI ಕಡಿಮೆ ಇರುತ್ತವೆ.
ಅನ್ನದೊಂದಿಗೆ ಸಮತೋಲಿತ ಆಹಾರ – ಬೇಳೆ, ತರಕಾರಿಗಳು, ಸೊಪ್ಪುಗಳು, ಪ್ರೋಟೀನ್ ಹಾಗೂ ತುಪ್ಪವನ್ನು ಸೇರಿಸಿ ಅನ್ನ ತಿನ್ನಬೇಕು.
ಸೇವನೆ ಪ್ರಮಾಣ ನಿಯಂತ್ರಣ – ದೇಹದ ತೂಕ ಮತ್ತು ದೈಹಿಕ ಚಟುವಟಿಕೆಯ ಆಧಾರದ ಮೇಲೆ ಅನ್ನದ ಪ್ರಮಾಣವನ್ನು ಸರಿಪಡಿಸಬೇಕು.
ಅನ್ನ ತಿನ್ನುವ ವಿಧಾನ – ನಿಧಾನವಾಗಿ ತಿನ್ನುವುದು, ನಿಂಬೆ ರಸ ಸೇರಿಸಿ ತಿನ್ನುವುದು GI ಮಟ್ಟವನ್ನು ನಿಯಂತ್ರಿಸುತ್ತದೆ.
ವ್ಯಾಯಾಮದ ಅವಶ್ಯಕತೆ – ನಿಯಮಿತ ಶಾರೀರಿಕ ಚಟುವಟಿಕೆ ಅನ್ನ ಸೇವನೆಯಿಂದ ಉಂಟಾಗುವ ಶುಗರ್ ಏರಿಕೆಯನ್ನು ತಡೆಯುತ್ತದೆ.