Saturday, August 30, 2025

ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆ: ವಿಶೇಷ ಕಾನೂನು ರೂಪಿಸುವಂತೆ ನಟ ವಿಜಯ್ ಪಕ್ಷ ‘ಸುಪ್ರೀಂ’ ಗೆ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆಗೆ ಸಂಬಂಧಿಸಿ ವಿಶೇಷ ಕಾನೂನು ರೂಪಿಸುವಂತೆ ನಟ ವಿಜಯ್ ತಮಿಳಗ ವೆಟ್ರಿ ಕಳಗಂ ಪಕ್ಷ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

ತಿರುನಲ್ವೇಲಿಯಲ್ಲಿ 27 ವರ್ಷದ ದಲಿತ ಟೆಕ್ಕಿ ಕವಿನ್ ಸೆಲ್ವಗಣೇಶ್ ಅವರ ಹತ್ಯೆಯ ಬಳಿಕ ತಮಿಳುನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಟಿವಿಕೆ ಈ ನಿರ್ಣಯ ಕೈಗೊಂಡಿದೆ.

ಜಾತಿ ಸಂಬಂಧಿತ ಮರ್ಯಾದಾ ಹತ್ಯೆಗಳನ್ನು ನಿಭಾಯಿಸಲು ಪ್ರತ್ಯೇಕ ಕಾನೂನು ಜಾರಿಗೆ ತರಬೇಕು. ಅಂತಹ ಅಪರಾಧಗಳನ್ನು ತಡೆಯಲು ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳು ಸಾಕಾಗುವುದಿಲ್ಲ ಎಂದು ಹೇಳಿದೆ. ಟಿವಿಕೆ ಚುನಾವಣಾ ಕಾರ್ಯದರ್ಶಿ ಆಧವ್ ಅರ್ಜುನ ಅವರು ಪಕ್ಷದ ಪರವಾಗಿ ಈ ಅರ್ಜಿ ಸಲ್ಲಿಸಿದ್ದಾರೆ.

ತಿರುನಲ್ವೇಲಿಯ ಪಳಯಂಕೊಟ್ಟೈನಲ್ಲಿರುವ ಆಸ್ಪತ್ರೆಯ ಹೊರಗೆ ಜುಲೈ 27 ರಂದು ಕವಿನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಬಲ ತೇವರ್ ಸಮುದಾಯಕ್ಕೆ ಸೇರಿದ್ದ ಯುವತಿಯೊಂದಿಗೆ ಅವರು ಸಂಬಂಧ ಹೊಂದಿದ್ದರು. ಯುವತಿಯ ಸಹೋದರ ಸುರ್ಜಿತ್ ಅವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ ಆಗಿದ್ದ ಸುರ್ಜಿತ್ ಅವರ ತಂದೆ ಸರವಣನ್ ಹೆಸರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದ್ದು, ಅನಂತರ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ಬಂಧಿಸಲಾಗಿದೆ.

ಈ ನಿಟ್ಟಿನಲ್ಲಿ ತಮಿಳುಳಗ ವೆಟ್ರಿ ಕಳಗಂ (ಟಿವಿಕೆ) ಮಾತ್ರವಲ್ಲ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಸಿಪಿಐ ಮತ್ತು ಸಿಪಿಐ(ಎಂ) ಅಲ್ಹಾದ್ ಸೇರಿದಂತೆ ಇತರ ಪಕ್ಷಗಳು ಕೂಡ ವಿಶೇಷ ಕಾನೂನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಇದನ್ನೂ ಓದಿ