ಬೆಳಗಿನ ಉಪಾಹಾರಕ್ಕೆ ಪಡ್ಡು ತಿನ್ನೋದು ಎಲ್ಲರಿಗೂ ತುಂಬಾ ಇಷ್ಟ. ಇದನ್ನು ವಿಭಿನ್ನ ರೀತಿಯಲ್ಲಿ ತಯಾರಿಸಬಹುದು. ಸಾಮಾನ್ಯವಾಗಿ ಪಡ್ಡು ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲಾಗುತ್ತದೆ. ಆದರೆ ಪೌಷ್ಟಿಕಾಂಶ ಹೆಚ್ಚಿಸಲು ತರಕಾರಿಗಳನ್ನು ಸೇರಿಸಿ ಮಾಡಿದರೆ ಇನ್ನಷ್ಟು ಆರೋಗ್ಯಕರವಾಗುತ್ತದೆ. ಇಂದಿನ ವಿಶೇಷ ರೆಸಿಪಿ ಕ್ಯಾರೆಟ್ ಪಡ್ಡು. ಕ್ಯಾರೆಟ್‌ನಲ್ಲಿ ಇರುವ ವಿಟಮಿನ್ A, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ನಮ್ಮ ಕಣ್ಣು, ಚರ್ಮ ಹಾಗೂ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು
ಅಕ್ಕಿ – 2 ಕಪ್
ಉದ್ದಿನ ಬೇಳೆ – ½ ಕಪ್
ಮೆಂತೆ ಕಾಳು – 1 ಟೀ ಸ್ಪೂನ್
ಕ್ಯಾರೆಟ್ ತುರಿ – 1 ಕಪ್
ಈರುಳ್ಳಿ ಸಣ್ಣಗೆ ಕತ್ತರಿಸಿದ – 1
ಹಸಿಮೆಣಸು – 2
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯವಷ್ಟು
ತಯಾರಿಸುವ ವಿಧಾನ
ಮೊದಲು ಅಕ್ಕಿ, ಉದ್ದಿನ ಬೇಳೆ ಹಾಗೂ ಮೆಂತೆ ಕಾಳನ್ನು 4–5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ನುಣ್ಣಗೆ ಅರೆದು, ಸ್ವಲ್ಪ ಹುಳಿ ಬರುವಂತೆ ಒಂದು ರಾತ್ರಿ ಹುದುಗಲು ಬಿಡಿ.
ಈಗ ಹಿಟ್ಟಿಗೆ ತುರಿದ ಕ್ಯಾರೆಟ್, ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈಗ ಪಡ್ಡು ತವೆಯನ್ನು ಬಿಸಿ ಮಾಡಿ, ಪ್ರತಿಯೊಂದು ಕುಳಿಯಲ್ಲೂ ಸ್ವಲ್ಪ ಎಣ್ಣೆ ಹಾಕಿ. ಹಿಟ್ಟನ್ನು ಸುರಿದು, ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.
ಒಂದು ಬದಿಯು ಬಣ್ಣ ಬದಲಾದ ಮೇಲೆ ತಿರುಗಿಸಿ ಮತ್ತೊಂದು ಬದಿಯೂ ಬೇಯಿಸಿ. ಈಗ ಕ್ಯಾರೆಟ್ ಪಡ್ಡು ರೆಡಿ.