ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಹಬ್ಬದ ತಯಾರಿಗಳು ಜೋರಾಗಿ ನಡೆಯುತ್ತಿದ್ದರೂ, ಉದ್ಘಾಟಕರ ಆಯ್ಕೆ ಕುರಿತಾದ ವಿವಾದ ಮಾತ್ರ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಿರುವುದಕ್ಕೆ ಬಿಜೆಪಿ ಹಾಗೂ ಕೆಲ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ “ಚಾಮುಂಡಿಬೆಟ್ಟ ಹಿಂದುಗಳ ಆಸ್ತಿ ಅಲ್ಲ” ಎಂಬ ಹೇಳಿಕೆ ಹೊಸ ಚರ್ಚೆಗೆ ಕಾರಣವಾಯಿತು. ಇದರ ಮಧ್ಯೆ, ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಸ್ಪಷ್ಟನೆ ನೀಡಿದ್ದು, ಚಾಮುಂಡಿಬೆಟ್ಟ ಹಿಂದುಗಳಿಗೆ ಸೇರಿದ್ದು ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದಾದೇವಿ, “ಚಾಮುಂಡಿಬೆಟ್ಟ ಹಿಂದೂಗಳಿಗೆ ಸೇರಿದೆ ಎಂದು ನಾನು ಪತ್ರದಲ್ಲೇ ಸ್ಪಷ್ಟಪಡಿಸಿದ್ದೇನೆ. ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ಧಾರ್ಮಿಕ ಆಚರಣೆಗಳ ಪ್ರಕಾರವೇ ನಡೆಯುತ್ತಿದೆ. ಚಾಮುಂಡಿ ದೇವರು ಯದುವಂಶದ ಮನೆ ದೇವರು. ಯದುವಂಶಕ್ಕೆ ಚಾಮುಂಡಿದೇವಿ ತಾಯಿಯಂತಿರುವರು. ರಾಜಕಾರಣಿಗಳು ಏನು ಬೇಕಾದರೂ ಹೇಳಬಹುದು, ಆದರೆ ಅದು ಸತ್ಯವಾಗುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಅವರು ಮುಂದುವರಿದು, “ದೇವಸ್ಥಾನ ಕುರಿತ ಹೋರಾಟ 70 ವರ್ಷಗಳಿಂದ ನ್ಯಾಯಾಲಯದಲ್ಲಿದೆ. ಪ್ರಾಧಿಕಾರ ರಚನೆಯಾದರೂ ಅದು ಅಧಿಕೃತ ಅಲ್ಲ. ಅಂತಿಮವಾಗಿ ಕೋರ್ಟ್ ತೀರ್ಪು ಬಂದ ನಂತರವೇ ಎಲ್ಲವೂ ಸ್ಪಷ್ಟವಾಗುವುದು. ದೇವಸ್ಥಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಬೇಸರ ತಂದಿದೆ” ಎಂದು ಅಭಿಪ್ರಾಯಪಟ್ಟರು.
ದಸರಾ ಉದ್ಘಾಟಕರ ವಿವಾದ ಕುರಿತಂತೆ ಪ್ರಮೋದಾದೇವಿ, “ಇದರಲ್ಲಿ ನನಗೆ ಯಾವುದೇ ಅಭಿಪ್ರಾಯ ಇಲ್ಲ. ಆಹ್ವಾನ ಮಾಡಿದವರು, ಕರೆಸಿಕೊಂಡವರಿಗಷ್ಟೇ ಅದು ಗೊತ್ತು. ದಸರಾ ವಿಷಯದಲ್ಲಿ ಇಲ್ಲಿಯವರೆಗೆ ಸಾಕಷ್ಟು ರಾಜಕೀಯವಾಗಿದೆ, ಅದನ್ನು ಮತ್ತಷ್ಟು ಮುಂದುವರಿಸುವ ಅಗತ್ಯವಿಲ್ಲ” ಎಂದರು.
ಅವರು ಕೊನೆಗೆ, “ಸರ್ಕಾರದ ದಸರಾ ನಮ್ಮ ಪರಂಪರೆಯ ಭಾಗವಲ್ಲ. ನಮ್ಮ ದಸರಾ ಖಾಸಗಿಯಾಗಿಯೇ ನಡೆಯುತ್ತದೆ. ಅಂಬಾರಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ, ನಮ್ಮ ಮನೆಯ ಇನ್ನೊಬ್ಬರು ಮಾತ್ರ ಹೋಗುತ್ತಾರೆ” ಎಂದು ಸ್ಪಷ್ಟಪಡಿಸಿದರು.