Sunday, August 31, 2025

ಅಲ್ಲು ಅರ್ಜುನ್ ಅಜ್ಜಿ ಕನಕರತ್ನಂ ನಿಧನ: ಮೈಸೂರಲ್ಲಿ ಶೂಟ್ ಅರ್ಧಕ್ಕೆ ಬಿಟ್ಟು ತೆರಳಿದ ರಾಮ್ ಚರಣ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ಸಿನಿಮಾ ಕ್ಷೇತ್ರದ ಹೆಸರಾಂತ ಕುಟುಂಬದ ಹಿರಿಯರಾದ ಅಲ್ಲು ಕನಕರತ್ನಂ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರು ಎಳೆದಿದ್ದಾರೆ. ಅಂತಿಮ ವಿಧಿ ವಿಧಾನಗಳನ್ನು ಮಗ ಮತ್ತು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಮನೆಯಲ್ಲಿ ಇಂದು ಸಂಜೆ ನೆರವೇರಿಸಲಾಗುವುದು.

ಕನಕರತ್ನಂ ಅವರು ತೆಲುಗು ಚಲನಚಿತ್ರರಂಗದ ದಿಗ್ಗಜ ನಟ ಹಾಗೂ ಪದ್ಮಶ್ರೀ ಪುರಸ್ಕೃತ ಅಲ್ಲು ರಾಮಲಿಂಗಯ್ಯ ಅವರ ಪತ್ನಿಯಾಗಿದ್ದರು. ಅಲ್ಲು ರಾಮಲಿಂಗಯ್ಯ ಅವರು 2004ರಲ್ಲಿ ನಿಧನ ಹೊಂದಿದ್ದರು. ಕುಟುಂಬದ ಹಿರಿಯರಾಗಿ ಎಲ್ಲರಿಗೂ ಪ್ರೀತಿಯಾತ್ರರಾಗಿದ್ದ ಕನಕರತ್ನಂ ಅವರ ನಿಧನದಿಂದ ಅಲ್ಲು ಕುಟುಂಬವೇ ದುಃಖದ ಮಡುವಿನಲ್ಲಿ ಮುಳುಗಿದೆ.

ಅಜ್ಜಿ ಸಾವಿನ ಸುದ್ದಿ ತಿಳಿದ ಕೂಡಲೇ ಮೊಮ್ಮಗ ಅಲ್ಲು ಅರ್ಜುನ್, ಮುಂಬೈನಲ್ಲಿ ನಡೆಯುತ್ತಿದ್ದ ಚಲನಚಿತ್ರ ಶೂಟಿಂಗ್ ಅರ್ಧದಲ್ಲೇ ನಿಲ್ಲಿಸಿ ಹೈದರಾಬಾದ್‌ಗೆ ತೆರಳಿದ್ದಾರೆ. ಮಧ್ಯಾಹ್ನದ ವೇಳೆಗೆ ಅವರು ತಲುಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇನ್ನೊಂದು ಕಡೆ, ಮೈಸೂರಿನಲ್ಲಿ ಶೂಟಿಂಗ್‌ನಲ್ಲಿ ನಿರತರಾಗಿದ್ದ ರಾಮ್ ಚರಣ್ ಕೂಡ ಬುಚಿ ಬಾಬು ಸನಾ ನಿರ್ದೇಶನದ ಪೆದ್ದಿ ಚಿತ್ರದ ಶೂಟಿಂಗ್ ಸ್ಥಗಿತಗೊಳಿಸಿ ಹೈದರಾಬಾದ್‌ಗೆ ತೆರಳಿದ್ದಾರೆ.

ಇದನ್ನೂ ಓದಿ