Sunday, August 31, 2025

ಅಭಿಮಾನ್ ಸ್ಟುಡಿಯೋ ಭೂಮಿ ಮರು ವಶಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿಮಾನ್ ಸ್ಟುಡಿಯೋ ಷರತ್ತು ಉಲ್ಲಂಘನೆ ಮಾಡಲಾಗಿದೆ. ಈ ಹಿನ್ನೆಲೆ ಭೂಮಿ ಮರು ವಶಕ್ಕೆ ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನ್ ಸ್ಟುಡಿಯೋಗೆ ಕೆಂಗೇರಿ ಹೋಬಳಿ ಸರ್ವೆ ನಂ.26ರಲ್ಲಿ 20 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. 1970ರಲ್ಲಿ ಕೆಲವು ಷರತ್ತುಗಳನ್ನು ಹಾಕಿ 6 ಸಾವಿರಕ್ಕೆ 20 ಎಕರೆ ಜಮೀನು ನೀಡಲಾಗಿತ್ತು ಎಂದು ಹೇಳಿದರು.

ಭೂಮಿಯನ್ನು ಅಭಿಮಾನ್ ಸ್ಟುಡಿಯೋ ಕೆಲಸಕ್ಕಾಗಿ ಬಳಕೆ ಮಾಡಬೇಕೆಂಬ ಷರತ್ತು ವಿಧಿಸಲಾಗಿತ್ತು. 10 ಎಕರೆ ಜಮೀನು ಮಾರಾಟಕ್ಕೆ ಅವಕಾಶ ಕೇಳಿದ್ದರು. ಆದರೇ ಎಲ್ಲಾ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಾರೆ. 14.37 ಕೋಟಿಗೆ 1 ಎಕರೆ ಜಮೀನು ಮಾರಾಟಕ್ಕೆ ಮುಂದಾಗಿದ್ದಾರೆ. ಷರತ್ತು ಉಲ್ಲಂಘನೆ ಆಗಿದ್ದರಿಂದ ಭೂಮಿ ಮರು ವಶಕ್ಕೆ ಸೂಚನೆ ನೀಡಲಾಗಿದೆ ಎಂದರು.

ಸ್ಟುಡಿಯೋ ಜಾಗವನ್ನು ಕಂದಾಯ ಇಲಾಖೆಯವರು ವಶಕ್ಕೆ ಪಡೆದು, ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಬೇಕು ಎಂದು ಪ್ರಸ್ತಾವನೆ ಕಳುಹಿಸಿದ್ದೇವೆ. ಕಂದಾಯ ಇಲಾಖೆಯಿಂದ ಜಾಗ ವಶಕ್ಕೆ ಪಡೆಯುವ ಕೆಲಸ ನಡೆಯುತ್ತಿದೆ. ನಂತರ ಆ ಭೂಮಿಯಲ್ಲಿ ಟ್ರೀ ಪಾರ್ಕ್‌ ಮಾಡುವ ಉದ್ದೇಶವಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ