Monday, September 1, 2025

Salt | ಬಿಪಿ ಬರಬಾರದು ಅಂತ ಕಡಿಮೆ ಉಪ್ಪು ತಿಂತಿದ್ದೀರಾ? ಹಾಗಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ

ಅತಿಯಾದ ಉಪ್ಪು ಸೇವನೆಯು ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದ ವಿಷಯ. ಆದರೆ ಉಪ್ಪನ್ನು ಕಡಿಮೆ ಸೇವಿಸಿದರೆ ಅಯೋಡಿನ್ ಕೊರತೆಯು ಉಂಟಾಗುತ್ತದೆ ಎಂಬುದು ಅಷ್ಟಾಗಿ ಗಮನಕ್ಕೆ ಬರುತ್ತಿಲ್ಲ. ಅಯೋಡಿನ್ ನಮ್ಮ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳಲ್ಲಿ ಒಂದು. ಇದರ ಕೊರತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುವುದು, ಗರ್ಭಿಣಿಯರಲ್ಲಿ ತೊಂದರೆಗಳು ಎದುರಾಗುವುದು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ತಲೆದೋರಬಹುದು. ವರದಿಗಳ ಪ್ರಕಾರ ಪ್ರಪಂಚದಾದ್ಯಂತ ಸುಮಾರು ಎರಡು ಶತಕೋಟಿ ಜನರು ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ.

ಅಯೋಡಿನ್ ಕೊರತೆಯ ಲಕ್ಷಣಗಳು:
ದೇಹದಲ್ಲಿ ಅಯೋಡಿನ್ ಕೊರತೆಯುಂಟಾದರೆ ನಿರಂತರ ಆಯಾಸ, ದೌರ್ಬಲ್ಯ, ಯಾವುದೇ ಕಾರಣವಿಲ್ಲದೆ ತೂಕ ಹೆಚ್ಚಾಗುವುದು, ಹಸಿವಿನ ಕೊರತೆ, ಒಣ ಚರ್ಮ, ಏಕಾಗ್ರತೆ ಕುಸಿತ ಹಾಗೂ ಜ್ಞಾಪಕಶಕ್ತಿ ಕಡಿಮೆಯಾಗುವುದು ಸಾಮಾನ್ಯ. ಮಕ್ಕಳಲ್ಲಿ ಬೆಳವಣಿಗೆಯ ಪ್ರಕ್ರಿಯೆ ಕುಂಠಿತಗೊಳ್ಳುತ್ತದೆ.

ಹೆಚ್ಚಾಗಿ ಯಾರಿಗೆ ತೊಂದರೆ?:
ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ಮಕ್ಕಳು ಅಯೋಡಿನ್ ಕೊರತೆಯಿಂದ ಹೆಚ್ಚು ಬಳಲುತ್ತಾರೆ ಎಂದು ತಜ್ಞರು ಎಚ್ಚರಿಸುತ್ತಾರೆ. ಕೇವಲ ಉಪ್ಪಿನಿಂದಲೇ ಈ ಕೊರತೆ ನಿವಾರಣೆ ಆಗುವುದಿಲ್ಲ. ಇತರ ಆಹಾರಗಳ ಮೂಲಕವೂ ಅಯೋಡಿನ್ ಪಡೆಯುವುದು ಅಗತ್ಯ.

ಪರಿಹಾರ ಮಾರ್ಗಗಳು:
ಸಮುದ್ರ ಮೀನು, ಸೀಗಡಿ, ಮೊಟ್ಟೆ, ಹಾಲು, ಚೀಸ್, ಮೊಸರು ಮತ್ತು ಚಿಕನ್‌ಗಳಲ್ಲಿ ಅಯೋಡಿನ್ ಹೇರಳವಾಗಿದೆ. ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉತ್ತಮ. ಪ್ರತಿಯೊಂದು ಆರು ತಿಂಗಳಿಗೊಮ್ಮೆ ದೇಹದಲ್ಲಿ ಅಯೋಡಿನ್ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಅಗತ್ಯ. ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಪರಿಶೀಲಿಸುವ ಮೂಲಕ ಅಯೋಡಿನ್ ಕೊರತೆಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ