ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮಹಾನಗರ ಪಾಲಿಕೆ (BBMP) ನಗರದಲ್ಲಿ ಆಸ್ತಿ ತೆರಿಗೆ ಪಾವತಿಸದೇ ಸುಮ್ಮನಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ತಕ್ಷಣ ಪಾವತಿಸುವಂತೆ ನೋಟಿಸ್ ನೀಡಲಾಗಿದ್ದು, ಪಾಲಿಸದಿದ್ದರೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಚರ–ಸ್ಥಿರ ಆಸ್ತಿಗಳ ತುರ್ತು ಮಾರಾಟ ಮಾಡುವುದು ಸೇರಿದಂತೆ ವಸೂಲಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಕುರಿತ ಆದೇಶವನ್ನು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೊರಡಿಸಿದ್ದಾರೆ.
ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಸಂಖ್ಯೆ
ನಗರದಾದ್ಯಂತ ಒಟ್ಟು 2.75 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ. ಇವರ ವಿರುದ್ಧ ಈಗಾಗಲೇ ನೋಟಿಸ್ ನೀಡಲಾಗಿದೆ. ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ BBMPtax.karnataka.gov.in ಮೂಲಕ ಸುಲಭವಾಗಿ ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಯಾವ ವಲಯದಲ್ಲಿ ಎಷ್ಟು ತೆರಿಗೆ ಬಾಕಿ?
ಮಹದೇವಪುರ ವಲಯ: 65,040 ಸುಸ್ತಿದಾರರು, 197.90 ಕೋಟಿ ಬಾಕಿ.
ದಕ್ಷಿಣ ವಲಯ: 25,162 ಸುಸ್ತಿದಾರರು, 116.81 ಕೋಟಿ ಬಾಕಿ.
ಪೂರ್ವ ಮತ್ತು ಬೊಮ್ಮನಹಳ್ಳಿ ವಲಯಗಳು: ಗಣನೀಯ ತೆರಿಗೆ ಬಾಕಿ.
ಯಲಹಂಕ ಮತ್ತು ಪಶ್ಚಿಮ ವಲಯಗಳು: ಬಾಕಿದಾರರ ಸಂಖ್ಯೆ ಹೆಚ್ಚಳ.
ರಾಜರಾಜೇಶ್ವರಿ ನಗರ ಮತ್ತು ದಸರಹಳ್ಳಿ ವಲಯಗಳು: ಸಾಕಷ್ಟು ಆಸ್ತಿ ತೆರಿಗೆ ಪಾವತಿ ಆಗದೆ ನಷ್ಟ.
ಎಲ್ಲಾ ವಲಯಗಳನ್ನು ಸೇರಿಸಿದಾಗ, ಒಟ್ಟಾರೆಯಾಗಿ 786.86 ಕೋಟಿ ತೆರಿಗೆ ಪಾವತಿ ಆಗದೆ ಬಿಬಿಎಂಪಿಗೆ ಭಾರೀ ನಷ್ಟವಾಗಿದೆ.