Wednesday, September 3, 2025

ಅಸ್ಪೃಶ್ಯತೆ ತೊಡೆದು ಹಾಕುವಲ್ಲಿ ಪ್ರತಿಯೊಬ್ಬ ಹಿಂದು ಶ್ರಮಿಸಬೇಕು: ರಾಜೇಶ್ ಪದ್ಮಾರ್

ಹೊಸದಿಗಂತ ವರದಿ,ಚಿತ್ರದುರ್ಗ :

ಹಿಂದು ಸಮಾಜದ ಅನೇಕ ಶ್ರೇಷ್ಠ ಮೌಲ್ಯಗಳು ಅಸ್ಪೃಶ್ಯತೆಯಿಂದ ಮಾಸಿ ಹೋಗಿವೆ. ಇದನ್ನು ತೊಡೆದು ಹಾಕುವಲ್ಲಿ ಪ್ರತಿಯೊಬ್ಬ ಹಿಂದು ಶ್ರಮಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಕರೆ ನೀಡಿದರು.

ವಿಶ್ವ ಹಿಂದೂ ಪರಿಷತ್ – ಬಜರಂಗದಳ ಸಂಯುಕ್ತಾಶ್ರಯದಲ್ಲಿ ನಗರದ ಜೈನಧಾಮದಲ್ಲಿ ಹಮ್ಮಿಕೊಂಡಿರುವ ಹಿಂದೂ ಮಹಾ ಗಣಪತಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಬುಧವಾರದ ವಿಚಾರ ಗೋಷ್ಠಿಯಲ್ಲಿ ’ಸಾಮರಸ್ಯ’ ವಿಷಯ ಕುರಿತು ಮಾತನಾಡಿದ ಅವರು, ಹಿಂದು ಸಮಾಜದಲ್ಲಿ ಅನೇಕ ಶ್ರೇಷ್ಠ ಮೌಲ್ಯಗಳಿವೆ. ಜಗತ್ತಿನ ಇತರೆ ರಾಷ್ಟ್ರಗಳು ಸಹ ಭಾರತೀಯ ಸಂಸ್ಕೃತಿ, ಪರಂಪರೆಯತ್ತ ತಿರುಗಿ ನೋಡುತ್ತಿವೆ. ಆದರೆ ಅಸ್ಪೃಶ್ಯತೆ ಎಂಬ ಒಂದು ಅಂಶದಿಂದ ಹಿಂದು ಸಮಾಜಕ್ಕೆ ಹಿನ್ನಡೆಯಾಗಿದೆ ಎಂದರು.

ಅಸ್ಪೃಶ್ಯತೆ ಎಂಬುದು ಸವರ್ಣೀಯ ಸಮಾಜದ ಮಾನಸಿಕ ಕೊಳೆ. ಇದರಿಂದಾಗಿ ಹಿಂದು ಸಮಾಜ ಶ್ರೇಷ್ಠತೆಯ ವ್ಯಸನದಿಂದ ಬಳಲುವಂತಾಗಿದೆ. ಅಸ್ಪೃಶ್ಯತೆ, ಶ್ರೇಷ್ಠತೆಯಿಂದ ಸಮಾಜ ತತ್ತರಿಸಿದೆ. ನಮ್ಮ ದೇಶದಲ್ಲಿ ಅನೇಕ ಜಾತಿ, ಮತ, ಪಂಥ, ಆಚಾರ, ವಿಚಾರಗಳಿವೆ. ಹಾಗಾಗಿ ನಾವು ವಿವಿಧತೆಯಲ್ಲಿ ಏಕತೆಯನ್ನು ಕಾಯ್ದುಕೊಂಡು ಬದುಕಬೇಕಾಗಿದೆ. ಎಲ್ಲರೂ ತಮ್ಮ ಆಚಾರ, ವಿಚಾರ, ಅಸ್ಥಿತ್ವವನ್ನು ಉಳಿಸಿಕೊಂಡು ಎಲ್ಲರೊಳಗೆ ಒಂದಾಗಿ ಬದುಕುವುದೇ ಸಾಮರಸ್ಯ. ಇಂತಹ ಸಾಮರಸ್ಯ ಇಂದು ಹಿಂದು ಸಮಾಜಕ್ಕೆ ಅಗತ್ಯವಿದೆ ಎಂದು ಹೇಳಿದರು.

ನಮ್ಮ ದೇಶದ ಯಾವ ಶಾಸ್ತ್ರಗಳಲ್ಲೂ ಅಸ್ಪೃಶ್ಯತೆಯ ಬಗ್ಗೆ ಹೇಳಿಲ್ಲ. ಎಲ್ಲ ಶಾಸ್ತ್ರಗಳು ಪ್ರತಿಯೊಬ್ಬ ಮನುಷ್ಯ ಶ್ರೇಷ್ಠ ಎಂದು ಹೇಳಿವೆ. ಆದರೆ ಈ ಅಸ್ಪೃಶ್ಯತೆ ಪಿಡುಗು ಎಲ್ಲಿಂದ ಬಂತೆಂಬುದು ತಿಳಿಯುತ್ತಿಲ್ಲ. ಹಾಗಾಗಿ ಹಿಂದು ಸಮಾಜದಿಂದ ಹೊರ ಹೋಗಲು ಸಾವಿರಾರು ದಾರಿಗಳಿವೆ. ಆದರೆ ಒಳಗೆ ಬರಲು ಯಾವುದೇ ದಾರಿ ಇಲ್ಲದಂತಾಗಿದೆ. ಮರಳಿ ಬರುವವರನ್ನು ಯಾರು ಸ್ವೀಕರಿಸಬೇಕೆಂಬ ಪ್ರಶ್ನೆ ಮೂಡುತ್ತಿದೆ. ಹಾಗಾಗಿ ಈ ಕುರಿತು ಪ್ರತಿಯೊಬ್ಬರೂ ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಕಿವಿಮಾತು ಹೇಳಿದರು.

ಧ್ಯಾನ ಮತ್ತು ಕ್ರೀಯೆ ಎಂಬುದು ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ. ಸಾಮರಸ್ಯದ ಪಕ್ಷಿ ಹಾರಬೇಕಾದಲ್ಲಿ ಎರಡೂ ರೆಕ್ಕೆಗಳು ಬೇಕು. ತಪ್ಪಿದಲ್ಲಿ ಅಸ್ಪೃಶ್ಯತೆಯ ನೋವು ದೂರವಾಗುವುದಿಲ್ಲ. ಬಸ್ಸು, ಮಾರುಕಟ್ಟೆ ಮತ್ತಿತರ ಕಡೆಗಳಲ್ಲಿ ಎಲ್ಲರೊಡನೆ ನಾವು ಒಂದಾಗಿರುತ್ತೇವೆ. ಆದರೆ ದೇವಸ್ಥಾನ, ನೆಂಟಸ್ತನ, ಊಟೋಪಚಾರದ ವಿಚಾರ ಬಂದಾಗ ನಮಗರಿವಿಲ್ಲದಂತೆ ಅಸ್ಪೃಶ್ಯತೆ ನಮ್ಮ ಮನಸ್ಸನ್ನು ಕಾಡುತ್ತದೆ. ಹಾಗಾಗಿ ಅಸ್ಪೃಶ್ಯತೆಯ ನೋವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ಶ್ರೇಷ್ಠ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ನಾಡಿನ ನಾನಾ ಕಡೆಗಳಲ್ಲಿ ಐತಿಹಾಸಿ ಸಮ್ಮೇಳನಗಳನ್ನು ನಡೆಸುತ್ತಿದೆ. ಇಂತಹ ಸಮ್ಮೇಳನಗಳಲ್ಲಿ ಅಸ್ಪೃಶ್ಯತೆಯ ನಿವಾರಣೆಗೆ ಅನೇಕ ನಿರ್ಣಯಗಳನ್ನು ಕೈಗೊಂಡಿದೆ. ಆ ಮೂಲಕ ಅಸ್ಪೃಶ್ಯತೆಯ ನಿವಾರಣೆಗೆ ಶ್ರಮಿಸುತ್ತಿದೆ. ಅದರಂತೆ ಪ್ರತಿಯೊಬ್ಬ ಹಿಂದು ಬಾಂಧವರು ಅಸ್ಪೃಶ್ಯತೆಯನ್ನು ತೊಡೆದು ಹಾಕುವ ಪಣ ತೊಡಬೇಕು. ಅದನ್ನು ಗಂಟು ಮೂಟೆ ಕಟ್ಟಿ ಸಮಾಜದಿಂದ ದೂರ ಎಸೆಯಬೇಕು. ಆ ಮೂಲಕ ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ ಮನೆ ಮಾಡಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಗಣಪತಿ ಉತಸ್ವ ಸಮಿತಿ ಉಪಾಧ್ಯಕ್ಷ ವಿ.ಎಲ್.ಪ್ರಶಾಂತ್, ಬಜರಂಗದಳ ನಗರ ಸಂಯೋಜಕ ದೀಪಕ್ ರಾಜ್, ನಗರ ಸಹ ಸಂಯೋಜಕ ಸಚಿನ್, ನಗರ ಗೋರಕ್ಷಕ ಪ್ರಮುಖ್ ನಾಗಭೂಷಣ್, ಹೇಮಂತ್, ನವೀನ್, ವಾಸುವೇವ ವೇದಿಕೆಯಲ್ಲಿದ್ದರು.

ಇದನ್ನೂ ಓದಿ