ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂನ ಸ್ಟಾರ್ ನಟ ಸೌಬಿನ್ ವಂಚನೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದಾರೆ.
ಸೌಬಿನ್ ನಟಿಸಿ ನಿರ್ಮಾಣ ಮಾಡಿದ್ದ ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಯನ್ನೇ ಬರೆದಿತ್ತು. 2024 ರ ಫೆಬ್ರವರಿಯಲ್ಲಿ ಬಿಡುಗಡೆ ಆಗಿದ್ದ ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾಕ್ಕೆ ಕೇವಲ 20 ಕೋಟಿ ಖರ್ಚು ಮಾಡಲಾಗಿತ್ತು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 200 ಕೋಟಿಗೂ ಹೆಚ್ಚಿನ ಹಣವನ್ನು ಗಳಿಕೆ ಮಾಡಿತು. ಸಿನಿಮಾಕ್ಕೆ ಸೌಬಿನ್ ಶಾಹಿರ್, ಬಾಬು ಶಾಹಿರ್ ಮತ್ತು ಶಾನ್ ಆಂಟೊನಿ ಬಂಡವಾಳ ಹೂಡಿದ್ದು, ಭಾರೀ ಮೊತ್ತದ ಲಾಭವನ್ನೇ ಸಿನಿಮಾನಿಂದ ಗಳಿಕೆ ಮಾಡಿದರು.
ಆದರೆ ಯುಎಇ ಮೂಲದ ಹೂಡಿಕೆದಾರರೊಬ್ಬರು ಸೌಬಿನ್ ಹಾಗೂ ಇತರೆ ನಿರ್ಮಾಪಕರುಗಳ ವಿರುದ್ಧ ವಂಚನೆ, ನಂಬಿಕೆ ದ್ರೋಹದ ಪ್ರಕರಣ ದಾಖಲು ಮಾಡಿದ್ದಾರೆ.
ಸೆಪ್ಟೆಂಬರ್ 5 ರಂದು ದುಬೈನಲ್ಲಿ ನಡೆಯಲಿರುವ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದುಬೈಗೆ ಪ್ರಯಾಣಿಸಲು ಸೌಬಿನ್ ಮುಂದಾಗಿದ್ದರು. ಆದರೆ ಅವರಿಗೆ ವೀಸಾ ಸಮಸ್ಯೆ ಎದುರಾಯ್ತು. ಸೌಬಿನ್ ವಿರುದ್ಧ ಹಣಕಾಸು ವಂಚನೆ ಪ್ರಕರಣ ಇದ್ದಿದ್ದರಿಂದ ದುಬೈಗೆ ಪ್ರವೇಶ ನಿರಾಕರಿಸಲಾಯ್ತು. ಕೂಡಲೇ ಸೌಬಿನ್ ಮ್ಯಾನೇಜರ್ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿ, ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು.
ಸೌಬಿನ್, ಸೈಮಾಗೆ ಹೋಗಿ ಪ್ರಶಸ್ತಿ ಪಡೆಯುವುದು ಮಲಯಾಳಂ ಚಿತ್ರರಂಗಕ್ಕೆ ಗೌರವಕಾರಕ ವಿಚಾರ. ಸೌಬಿನ್ ಅವರ ಪ್ರತಿಭೆಗೆ ನೀಡುತ್ತಿರುವ ಗೌರವ ಇದಾಗಿದ್ದು, ಅದನ್ನು ಅವರು ಸ್ವೀಕರಿಸಬೇಕಿದೆ, ಕಾರ್ಯಕ್ರಮ ಮುಗಿದ ಕೂಡಲೇ ಅವರು ಮರಳಿ ಬರಲಿದ್ದಾರೆ ಎಂದು ಸೌಬಿನ್ ಪರ ವಕೀಲರು ವಾದ ಮಾಡಿದರು. ವಾದ ಆಲಿಸಿದ ನ್ಯಾಯಾಲವು ಸೌಬಿನ್ ವಿದೇಶ ಪ್ರಯಾಣ ಮಾಡಬಾರದೆಂದು ನಿಬಂಧನೆ ಹೇರಿದೆ.
ಏನಿದು ಪ್ರಕರಣ?
‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ನಿರ್ಮಾಣಕ್ಕೆ ಸೌಬಿನ್ ಹಾಗೂ ಇನ್ನಿಬ್ಬರು ನಿರ್ಮಾಪಕರು ಕೇರಳದ ಅರೂರಿನ ಸಿರಾಜ್ ವಲಯತ್ತಾರ ಹಮೀದ್ ಎಂಬುವರ ಬಳಿ ಏಳು ಕೋಟಿ ರೂಪಾಯಿ ಹಣ ಪಡೆದಿದ್ದರಂತೆ. ಸಿನಿಮಾನಲ್ಲಿ ಬರುವ ಆದಾಯದಲ್ಲಿ 40% ಪಾಲನ್ನು ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರಂತೆ. ಆದರೆ ಸಿನಿಮಾ ಬ್ಲಾಕ್ ಬಸ್ಟರ್ ಆದ ಬಳಿಕ ಒಪ್ಪಂದದಂತೆ ಲಾಭವನ್ನು ಹಂಚಿಕೆ ಮಾಡಲಿಲ್ಲವಂತೆ ಸೌಬಿನ್ ಹಾಗೂ ಇತರೆ ನಿರ್ಮಾಪಕರು. ಹೀಗಾಗಿ ದೂರು ದಾಖಲಿಸಲಾಗಿದೆ.