ಪ್ರತಿ ಮನೆಯ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪಿಗೆ ವಿಶೇಷ ಸ್ಥಾನವಿದೆ. ಗ್ರೀನ್ ಚಟ್ನಿ, ದಾಲ್‌ಗೆ ತಡ್ಕಾ, ಸಾರು ಹಾಗೂ ವಿವಿಧ ತಿನಿಸುಗಳಲ್ಲಿ ಕೊತ್ತಂಬರಿಯ ಸೊಗಸಾದ ರುಚಿ ಸೇರಿಸಿದಾಗ, ಖಾದ್ಯ ಇನ್ನಷ್ಟು ರುಚಿಕರವಾಗುತ್ತದೆ. ಆದರೆ ಸಮಸ್ಯೆ ಏನೆಂದರೆ, ಮಾರುಕಟ್ಟೆಯಿಂದ ತಂದ ಕೊತ್ತಂಬರಿ ಸೊಪ್ಪು ಕೇವಲ 2-3 ದಿನಗಳಲ್ಲೇ ಒಣಗಲು ಪ್ರಾರಂಭಿಸುತ್ತದೆ. ಫ್ರೀಜರ್ ಇಲ್ಲದಿದ್ದರೆ ಅದು ಇನ್ನೂ ಬೇಗನೆ ಹಾಳಾಗುತ್ತದೆ. ಹೀಗಾಗಿ, ಜನರು ಮತ್ತೆ ಮತ್ತೆ ಮಾರುಕಟ್ಟೆಗೆ ಹೋಗುವ ಕಿರಿಕಿರಿಗೆ ಒಳಗಾಗುತ್ತಾರೆ. ಈ ಸಮಸ್ಯೆಗೆ ಸುಲಭ ಹಾಗೂ ವೆಚ್ಚವಿಲ್ಲದ ಪರಿಹಾರಗಳಿವೆ.
ಕೊತ್ತಂಬರಿ ಸೊಪ್ಪು ಬೇಗ ಹಾಳಾಗಲು ಕಾರಣ
ಕೊತ್ತಂಬರಿ ಸೊಪ್ಪು ಹೆಚ್ಚಿನ ತೇವಾಂಶವನ್ನು ಹೊಂದಿರುತ್ತದೆ. ಇದನ್ನು ಸರಿಯಾಗಿ ಸಂಗ್ರಹಿಸದಿದ್ದರೆ, ತೇವಾಂಶ ಶಾಖ ಮತ್ತು ಗಾಳಿಯೊಂದಿಗೆ ಸೇರಿ ಎಲೆಗಳನ್ನು ಹಳದಿ ಅಥವಾ ಕಪ್ಪಾಗಿಸುತ್ತದೆ. ಪಾಲಿಥಿನ್ ಚೀಲದಲ್ಲಿ ಇಡುವುದು ಇನ್ನಷ್ಟು ಹಾನಿಕಾರಕ. ತೇವಾಂಶ ಹೆಚ್ಚಾಗಿ ಎಲೆಗಳು ಬೇಗನೆ ಕೊಳೆಯುತ್ತವೆ.

ತಾಜಾವಾಗಿಡುವ ವಿಧಾನಗಳು
ಬಟ್ಟೆಯಲ್ಲಿ ಸುತ್ತಿಡುವುದು – ಕೊತ್ತಂಬರಿಯನ್ನು ನೀರಿನಿಂದ ತೊಳೆದು ಚೆನ್ನಾಗಿ ಒಣಗಿಸಿ, ಹತ್ತಿ ಅಥವಾ ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ ಪಾತ್ರೆಯಲ್ಲಿ ಇಟ್ಟರೆ ಒಂದು ವಾರ ತಾಜಾವಾಗಿರುತ್ತದೆ.
ಮಣ್ಣಿನ ಮಡಿಕೆ ಬಳಕೆ – ಸ್ವಲ್ಪ ತೇವಗೊಳಿಸಿದ ಕೊತ್ತಂಬರಿಯನ್ನು ಮಣ್ಣಿನ ಮಡಿಕೆಯಲ್ಲಿ ಇಟ್ಟರೆ ಅದರ ತಂಪು ಕೊತ್ತಂಬರಿಯನ್ನು ದೀರ್ಘಕಾಲ ಹಸಿರಾಗಿಡುತ್ತದೆ.

ನಿಂಬೆ ಸಿಪ್ಪೆ ಉಪಯೋಗ – ಮುಚ್ಚಿದ ಪಾತ್ರೆಯಲ್ಲಿ ಕೊತ್ತಂಬರಿಯ ಜೊತೆಗೆ ನಿಂಬೆ ಸಿಪ್ಪೆ ಇಟ್ಟರೆ ಬ್ಯಾಕ್ಟೀರಿಯಾ ಹರಡುವುದು ಕಡಿಮೆಯಾಗುತ್ತದೆ ಮತ್ತು ಎಲೆಗಳು ಹಸಿರಾಗಿರುತ್ತವೆ.
ಪೇಪರ್ ನಲ್ಲಿ ಸುತ್ತುವುದು – ಪೇಪರ್ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಕೊತ್ತಂಬರಿಯನ್ನು ಒಣಗಿಸಿ ಪೇಪರ್ ನಲ್ಲಿ ಸುತ್ತಿ ಇಟ್ಟರೆ ಹೆಚ್ಚು ದಿನ ಹಾಳಾಗುವುದಿಲ್ಲ.