Friday, September 5, 2025

2026ರ ಐಪಿಎಲ್‌ ಆಟನೇ ಲಾಸ್ಟ್? ಬರುವ ವರ್ಷ CSKಗೆ ವಿದಾಯ ಹೇಳ್ತಾರಾ ಧೋನಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ದಂತಕಥೆ ಎಂಎಸ್‌ ಧೋನಿ ಇನ್ನೊಂದು ಬಾರಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. 2026ರ ಐಪಿಎಲ್‌ ಸೀಸನ್‌ ಧೋನಿಯ ವೃತ್ತಿಜೀವನದ ಕೊನೆಯದಾಗಲಿದೆ ಎಂಬ ವರದಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್ (CSK) ತಂಡದೊಂದಿಗೆ ತಮ್ಮ ಐಕಾನಿಕ್‌ ಪಯಣವನ್ನು ಅಂತ್ಯಗೊಳಿಸಲು ಧೋನಿ ಸಜ್ಜಾಗಿದ್ದಾರೆ ಎಂಬ ಮಾಹಿತಿ ಕ್ರಿಕೆಟ್‌ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಇದುವರೆಗೆ ಧೋನಿ ಅಥವಾ ಸಿಎಸ್‌ಕೆ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

CSK ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಮರಳುವಿಕೆಯು ಧೋನಿಯ ನಿರ್ಧಾರಕ್ಕೆ ಕಾರಣವಾಗಿದೆಯೆಂಬ ವರದಿ ಬಂದಿದೆ. ಧೋನಿ ಮತ್ತು ಶ್ರೀನಿವಾಸನ್ ನಡುವಿನ ಆಪ್ತ ಸಂಬಂಧವು ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದೆ. 2015ರಲ್ಲಿ ಶ್ರೀನಿವಾಸನ್ ಸ್ಥಾನದಿಂದ ಕೆಳಗಿಳಿದಿದ್ದರೂ, ಇದೀಗ ಮತ್ತೆ ಅಧ್ಯಕ್ಷರಾಗಿ ಮರಳಿದ್ದಾರೆ. ಅವರ ಪುತ್ರಿ ರೂಪಾ ಪೂರ್ಣಕಾಲೀನ ನಿರ್ದೇಶಕರಾಗಿರುವುದು ಕೂಡ ತಂಡದ ಒಳಚರಿತ್ರೆಯಲ್ಲಿ ಬದಲಾವಣೆ ತಂದಿದೆ. ಈ ಬೆಳವಣಿಗೆಗಳು ಧೋನಿಯನ್ನು ಮತ್ತೊಂದು ಸೀಸನ್‌ ಆಡಲು ಪ್ರೇರೇಪಿಸಿದೆಯೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಧೋನಿಯ ಐಪಿಎಲ್ ಪಯಣ ಮತ್ತು ಸವಾಲುಗಳು
2008ರಿಂದಲೂ CSKನ ಪ್ರಮುಖ ಮುಖವಾಗಿರುವ ಧೋನಿ, ತಂಡವನ್ನು ಐದು ಬಾರಿ ಐಪಿಎಲ್‌ ಚಾಂಪಿಯನ್ ಆಗಿ ಮಾಡಿಸಿದ್ದಾರೆ. 2025ರ ಸೀಸನ್‌ನಲ್ಲಿ ನಾಯಕತ್ವವನ್ನು ಯುವ ಆಟಗಾರ ಋತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದರೂ, ಗಾಯದ ಕಾರಣ ಮತ್ತೆ ನಾಯಕತ್ವ ವಹಿಸಿಕೊಂಡರು. ಆದರೆ, ಆ ಸೀಸನ್‌ನಲ್ಲಿ ತಂಡ ನಿರೀಕ್ಷಿತ ಮಟ್ಟದಲ್ಲಿ ಆಡದೆ ಕೊನೆಯ ಸ್ಥಾನಕ್ಕೆ ಕುಸಿಯಿತು. ಆದಾಗ್ಯೂ, ಧೋನಿಯ ವೈಯಕ್ತಿಕ ಫಿಟ್‌ನೆಸ್ ಮತ್ತು ವಿಕೆಟ್‌ಕೀಪಿಂಗ್‌ ಸಾಮರ್ಥ್ಯ ಇನ್ನೂ ಶ್ರೇಷ್ಠವಾಗಿಯೇ ಇದೆ ಎಂದು ತಜ್ಞರು ಶ್ಲಾಘಿಸಿದ್ದಾರೆ.

2026ರ ಸೀಸನ್‌ ಧೋನಿಗೆ ಕೇವಲ ಕೊನೆಯ ಆಟವಲ್ಲ, ಭವ್ಯ ವಿದಾಯದ ಕನಸಾಗಿದೆ. CSKಗೆ ಆರನೇ ಟ್ರೋಫಿ ತಂದುಕೊಟ್ಟು, ಅದ್ವಿತೀಯ ದಾಖಲೆಯನ್ನು ಸ್ಥಾಪಿಸುವುದು ಅವರ ಗುರಿ ಎಂದು ಹೇಳಲಾಗಿದೆ. ಧೋನಿ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಡುವ ಕನಸನ್ನು ಹೊಂದಿದ್ದಾರೆ ಎಂಬ ವರದಿ ಹರಿದಾಡುತ್ತಿದೆ.

ಇದನ್ನೂ ಓದಿ