ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ನೂತನ ಜಿಎಸ್ಟಿ ಯೋಜನೆ ಕುರಿತು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯನ್ನು ಮೊದಲು ಜಾರಿಗೆ ತಂದಾಗ ಇದೇ ವಿಪಕ್ಷಗಳು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಲೇವಡಿ ಮಾಡಿದ್ದವು. ಈಗ ಜಿಎಸ್ಟಿ ಸುಧಾರಣೆಗಳಿಗೆ ತಾವೇ ಕ್ರೆಡಿಟ್ ಪಡೆಯಲು ಯತ್ನಿಸುತ್ತಿವೆ ಎಂದು ಅವರು ವ್ಯಂಗ್ಯವಾಡಿದ್ದಾರೆ .
ರಾಹುಲ್ ಗಾಂಧಿ ಹಿಂದೆಯೇ ಜಿಎಸ್ಟಿ ಸುಧಾರಣೆಗಳಿಗೆ ಸಲಹೆಗಳನ್ನು ನೀಡಿದ್ದರು. ಕಳೆದ 9 ವರ್ಷಗಳಿಂದ ಸರ್ಕಾರ ಈ ಸಲಹೆಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದರು.
ಇದೀಗ ಜಿಎಸ್ಟಿಯನ್ನು ಟೀಕಿಸುವ ಜನರಿಗೆ ನಿರ್ಮಲಾ ಸೀತಾರಾಮನ್, ತಿಳಿದು ಮಾತನಾಡುವಂತೆ ಸಲಹೆ ಕೊಟ್ಟಿದ್ದಾರೆ. ಭಾರತವು ಅರವತ್ತರ ದಶಕದಲ್ಲೇ ಜಿಎಸ್ಟಿಯನ್ನು ಜಾರಿಗೆ ತರಬಹುದಿತ್ತು. ಆದರೆ, ರಾಜಕೀಯ ಭೇದಗಳು ಈ ಸುಧಾರಣೆ ಆಗಲು ಬಿಡಲಿಲ್ಲ ಎಂದು ಹೇಳಿದ್ದಾರೆ.
ನೂತನ ಜಿಎಸ್ಟಿ ಸಿಸ್ಟಂ ಜಾರಿಗೆ ಬಂದರೆ ರಾಜ್ಯ ಸರ್ಕಾರಗಳಿಗೆ ತೆರಿಗೆ ಆದಾಯ ಕಡಿಮೆ ಆಗುತ್ತದೆ ಎನ್ನುವ ಆತಂಕಗಳಿಗೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ಕೊಟ್ಟಿದ್ದಾರೆ. ಜಿಎಸ್ಟಿ ತೆರಿಗೆ ಇಳಿಕೆಯಿಂದ ರಾಜ್ಯಗಳು ಮಾತ್ರವಲ್ಲ, ಕೇಂದ್ರವೂ ಬಾಧಿತವಾಗುತ್ತದೆ. ಕೇಂದ್ರವೇನು ರಾಜ್ಯಗಳಿಗೆ ದಾನ ಕೊಡುವುದಿಲ್ಲ. ಜಿಎಸ್ಟಿ ಜಾರಿಗೆ ತರಬೇಕಾದರೆ ಕೇಂದ್ರ ಮತ್ತು ರಾಜ್ಯಗಳೆಲ್ಲವೂ ಕೆಲ ತೆರಿಗೆಗಳನ್ನು ಬಿಟ್ಟುಕೊಟ್ಟಿವೆ ಎಂದು ಅವರು ವಿವರಿಸಿದ್ದಾರೆ.
ಕೇಂದ್ರಕ್ಕಾಗಲೀ, ರಾಜ್ಯಗಳಿಗಾಗಲೀ ಯಾವಾಗಲೂ ಪ್ರಜೆಗಳ ಕ್ಷೇಮವೇ ಮೊದಲ ಆದ್ಯತೆಯಾಗಬೇಕು. ಆದಾಯ ಎಲ್ಲಿಂದ ತರಬೇಕು ಎಂದು ನಂತರ ಯೋಚಿಸಬಬಹುದು ಎಂದು ಹೇಳಿರುವ ನಿರ್ಮಲಾ ಸೀತಾರಾಮನ್, ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಧೋರಣೆಯನ್ನು ಉದಾಹರಣೆಯಾಗ ನೀಡಿದ್ದಾರೆ.
ಆ ಸಂದರ್ಭದಲ್ಲೂ ಪ್ರಧಾನಿ ಮೋದಿ ಎದೆಗುಂದಲಿಲ್ಲ. ಅಯ್ಯೋ ಏನು ಮಾಡೋದು ಎನ್ನಲಿಲ್ಲ. ಆದಾಯಕ್ಕೆ ಹುಡುಕುವುದು ಈಗ ಬೇಡ. ಜನರಿಗೆ ಉಚಿತವಾಗಿ ಲಸಿಕೆ ನೀಡುವುದು ಗುರಿಯಾಗಬೇಕು ಎಂದು ಮೋದಿ ಹೇಳಿದ್ದರು’ ಎಂದು ನಿರ್ಮಲಾ ಸೀತಾರಾಮನ್ ಸ್ಮರಿಸಿದ್ದಾರೆ.
ಮದ್ಯದ ರೀತಿ ಪೆಟ್ರೋಲ್ ಮತ್ತು ಡೀಸಲ್ ಕೂಡ ಜಿಎಸ್ಟಿ ವ್ಯಾಪ್ತಿಗೆ ಬರೋದಿಲ್ಲ. ನಿರ್ಮಲಾ ಸೀತಾರಾಮನ್ ಇದನ್ನು ಸ್ಪಷ್ಟಪಡಿಸಿದ್ದಾರೆ