Wednesday, September 10, 2025

LIFE | Personal ಮತ್ತು Work Life ಬ್ಯಾಲೆನ್ಸ್ ಮಾಡ್ಬೇಕಾದ್ರೆ 8+8+8 ರೂಲ್ಸ್ ಫಾಲೋ ಮಾಡಿ!

ಇಂದಿನ ವೇಗದ ಜೀವನದಲ್ಲಿ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಹಲವರಿಗೂ ಕಷ್ಟವಾಗುತ್ತದೆ. ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ, ಸಮಯದ ಕೊರತೆ ಇವೆಲ್ಲದರ ನಡುವೆ ಜೀವನ ಗೊಂದಲದಿಂದ ತುಂಬಿಬಿಡುತ್ತದೆ. ಆದರೆ ಈ ಸವಾಲುಗಳ ನಡುವೆ ಬದುಕನ್ನು ಸರಳಗೊಳಿಸಲು ಒಂದು ಗೋಲ್ಡನ್ ರೂಲ್ ಇದೆ. ಅದೇ 8+8+8 ನಿಯಮ.

ನಿಯಮದ ಅರ್ಥ:
ಈ ನಿಯಮ ಬಹಳ ಸರಳ. ದಿನದ 24 ಗಂಟೆಯನ್ನು ಮೂರು ಸಮಭಾಗಗಳಾಗಿ ವಿಭಜಿಸಬೇಕು. 8 ಗಂಟೆ ನಿದ್ರೆಗಾಗಿ, 8 ಗಂಟೆ ಕೆಲಸಕ್ಕಾಗಿ, 8 ಗಂಟೆ ವೈಯಕ್ತಿಕ ಬದುಕಿಗೆ. ಹೀಗೆ ಮಾಡಿದರೆ ಜೀವನದಲ್ಲಿ ಸಮತೋಲನ ಮೂಡುತ್ತದೆ.

ಅಳವಡಿಸಿಕೊಳ್ಳುವ ವಿಧಾನ:
ವೈಯಕ್ತಿಕ ಬದುಕಿಗೆ ಮೀಸಲಾಗಿರುವ 8 ಗಂಟೆಯನ್ನು ಕುಟುಂಬದೊಂದಿಗೆ ಕಳೆಯಬಹುದು. ಪತ್ನಿ-ಮಕ್ಕಳ ಜೊತೆ ಸಮಯ ಕಳೆಯುವುದು, ಹವ್ಯಾಸ ಬೆಳೆಸಿಕೊಳ್ಳುವುದು, ಸ್ನೇಹಿತರ ಜೊತೆ ಮಾತನಾಡುವುದು, ಅಥವಾ ಸಿನಿಮಾ ನೋಡುವುದು – ಈ ಎಲ್ಲವೂ ಒತ್ತಡ ಕಡಿಮೆ ಮಾಡಲು ಸಹಾಯಕ.

ಸವಾಲುಗಳು:
ನಮ್ಮ ದೇಶದಲ್ಲಿ ಬಹುತೇಕ ಜನರು ಕಚೇರಿಗೆ ತಲುಪಲು ಹೆಚ್ಚಿನ ಸಮಯ ಪ್ರಯಾಣಕ್ಕೆ ವ್ಯಯಿಸಬೇಕಾಗುತ್ತದೆ. ಜೊತೆಗೆ ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ 8+8+8 ನಿಯಮವನ್ನು ಸಂಪೂರ್ಣವಾಗಿ ಪಾಲಿಸಲು ಕೆಲವೊಮ್ಮೆ ಕಷ್ಟವಾಗಬಹುದು. ಆದರೆ ಶಿಸ್ತಿನಿಂದ ಸಮಯವನ್ನು ಮ್ಯಾನೇಜ್ ಮಾಡಿದರೆ ಕನಿಷ್ಠ 8 ಗಂಟೆಗಳ ನಿದ್ರೆ ಹಾಗೂ ಸ್ವಲ್ಪವಾದರೂ ವೈಯಕ್ತಿಕ ಸಮಯ ಕಳೆಯುವುದು ಸಾಧ್ಯ.

ಪ್ರಯೋಜನಗಳು:
ಸರಿಯಾದ ನಿದ್ರೆಯಿಂದ ದೇಹ-ಮನಸ್ಸಿಗೆ ಚೈತನ್ಯ ದೊರೆಯುತ್ತದೆ. ಕೆಲಸದ ವೇಳೆ ಉತ್ಪಾದಕತೆ ಹೆಚ್ಚುತ್ತದೆ. ವೈಯಕ್ತಿಕ ಬದುಕು ಸಮೃದ್ಧವಾಗುತ್ತದೆ. ಹೀಗೆ ಮಾಡಿದರೆ ಒತ್ತಡ ಮುಕ್ತ, ಸಮತೋಲನದ ಬದುಕು ಸಾಧ್ಯವಾಗುತ್ತದೆ.

8+8+8 ನಿಯಮ ಕೇಳಲು ಸರಳವಾದರೂ, ಶಿಸ್ತಿನಿಂದ ಪಾಲಿಸಿದರೆ ಅದ್ಭುತವಾದ ಫಲಿತಾಂಶ ನೀಡುತ್ತದೆ. ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಸಮತೋಲನ ಸಾಧಿಸಲು ಈ ನಿಯಮ ನಿಜಕ್ಕೂ ಮಾಯಾಸೂತ್ರದಂತೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಸಾಧ್ಯವಾದಷ್ಟು ಈ ರೂಢಿಯನ್ನು ಅಳವಡಿಸಿಕೊಂಡು, ಆರೋಗ್ಯಕರ ಹಾಗೂ ಸಂತೋಷದ ಬದುಕು ನಿಮ್ಮದಾಗಲಿ.

ಇದನ್ನೂ ಓದಿ