ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮುಂಡಿ ಬೆಟ್ಟದ ದೇವಿಕೆರೆ ಕಟ್ಟೆ ಹಾಗೂ ತಾವರೆಕಟ್ಟೆಯ ಜನವಸತಿ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿದ್ದು, ನಿವಾಸಿಗಳು ಹಾಗೂ ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅರಣ್ಯ ಇಲಾಖೆ, ಇತ್ತೀಚೆಗೆ ಚಾಮುಂಡಿ ಬೆಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಚಲನವಲನಗಳು ಕಂಡುಬಂದಿರುವುದಾಗಿ ವರದಿಯಾಗಿದೆ. ಈ ವಿಷಯದ ಕುರಿತು ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಚಾಮುಂಡಿ ಬೆಟ್ಟದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚಿರತೆಯ ಸಂಚಾರವನ್ನು ಪತ್ತೆ ಹಚ್ಚಲು ರಾತ್ರಿ ಗಸ್ತು ಕಾರ್ಯ ನಿರ್ವಹಿಸಲಾಗುತ್ತಿದೆ. ಯಾವುದೇ ಹೊಸ ಮಾಹಿತಿ ಲಭ್ಯವಾದಲ್ಲಿ ತಕ್ಷಣವೇ ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.
ಸಾಯಂಕಾಲ ಮತ್ತು ಬೆಳಗಿನ ಸಮಯದಲ್ಲಿ, ವಿಶೇಷವಾಗಿ ಕತ್ತಲಾದ ಮೇಲೆ ಒಂಟಿಯಾಗಿ ಹೊರಗೆ ಹೋಗಬೇಡಿ. ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದ ಸುತ್ತಳತೆ 17ಕಿ.ಮೀ ಇದ್ದು ಅದಕ್ಕೆ ನಾಲ್ಕು ಗೇಟ್‌ಗಳಿವೆ. ಹೊಸಹುಂಡಿಯಿಂದ ಚಾಮುಂಡಿಬೆಟ್ಟ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯ ಸಂಚಾರವನ್ನು ಸಂಜೆ 6 ಗಂಟೆಯಿಂದ ಬೆಳ್ಳಗೆ 6 ರ ವರೆಗೆ ನಿಷೇಧಿಸಲಾಗಿದೆ.
ನಿಮ್ಮ ಮಕ್ಕಳ ಮತ್ತು ಸಾಕು ಪ್ರಾಣಿಗಳ ಮೇಲೆ ನಿಗಾ ಇಡಿ. ನಿಮ್ಮ ಮನೆಯ ಸುತ್ತಮುತ್ತಲಿನ ಪೊದೆಗಳನ್ನು ಸ್ವಚ್ಛವಾಗಿಡಿ. ಚಿರತೆ ಕಾಣಿಸಿಕೊಂಡರೆ, ಯಾವುದೇ ಕಾರಣಕ್ಕೂ ಅದರ ಹತ್ತಿರ ಹೋಗಲು ಪ್ರಯತ್ನಿಸಬೇಡಿ ಅಥವಾ ಅದನ್ನು ಕೆಣಕಲು ಹೋಗಬೇಡಿ. ಯಾವುದೇ ಚಿರತೆಯ ಚಲನವಲನ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.