ಹೊಸದಿಗಂತ ವರದಿ, ಚಿತ್ರದುರ್ಗ:
ವಿಶ್ವ ಹಿಂದೂ ಪರಿಷತ್ – ಬಜರಂಗದಳ ವತಿಯಿಂದ ನಗರದ ಜೈನಧಾಮದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಶನಿವಾರ ನಡೆಯಲಿದೆ. ಅಂದು ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಇದರ ಅಂಗವಾಗಿ ಗುರುವಾರ ಬೈಕ್‌ರ‍್ಯಾಲಿ ನಡೆಸಲಾಯಿತು.
ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಬೈಕ್‌ರ‍್ಯಾಲಿಗೆ ಚಾಲನೆ ನೀಡಿದರು.
ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಆರಂಭವಾದ ಬೈಕ್‌ರ‍್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಸಂಗೊಳ್ಳಿ ರಾಯಣ್ಣ ವೃತ್ತ, ಬುರುಜನಹಟ್ಟಿ ವೃತ್ತ, ರಂಗಯ್ಯನ ಬಾಗಿಲು ಮೂಲಕ ಸಾಗಿ ಗಾಂಧಿವೃತ್ತ ತಲುಪಿತು. ಬಳಿಕ ನಗರದ ಬಿ.ಡಿ. ರಸ್ತೆಯಲ್ಲಿ ಸಾಗಿದ ಬೈಕ್‌ರ‍್ಯಾಲಿ ಎಸ್‌ಬಿಎಂ ವೃತ್ತ, ಪ್ರವಾಸಿ ಮಂದಿರ, ವಾಸವಿ ವೃತ್ತದ ಮೂಲಕ ಜೆಸಿಆರ್ ಬಡಾವಣೆ ಕಡೆಗೆ ಸಾಗಿತು.
ನಂತರ ಜೆಸಿಆರ್ ವೃತ್ತ, ರಾಷ್ಟ್ರೀಯ ಹೆದ್ದಾರಿ-೧೩ ರ ಸರ್ವೀಸ್ ರಸ್ತೆಯಲ್ಲಿ ಸಾಗಿ ತುರುವನೂರು ಗೇಟ್ ಬಳಿಗೆ ಬಂದಿತು. ಬಳಿಕ ಆರ್‌ಟಿಓ ಕಚೇರಿ, ತಿಪ್ಪಜ್ಜಿ ಸರ್ಕಲ್ ಮೂಲಕ ಸಾಗಿ ಒನಕೆ ಓಬವ್ವ ವೃತ್ತ ತಲುಪಿತು. ಬಳಿಕ ಅಂಬೇಡ್ಕರ್ ವೃತ್ತ, ಮದಕರಿ ವೃತ್ತದ ಮೂಲಕ ಸರ್ಕಾರಿ ವಿಜ್ಞಾನ ಕಾಲೇಜು ಎದುರಿನ ಜೈನಧಾಮದಲ್ಲಿರುವ ಮಹಾ ಗಣಪತಿ ಮಂಟಪದ ಬಳಿ ಮುಕ್ತಾಯವಾಗಿತು.
ಬೈಕ್‌ರ‍್ಯಾಲಿಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಹಣೆಗೆ ತಿಲವಿಟ್ಟು, ಕೊರಳಲ್ಲಿ ಕೇಸರಿ ಶಾಲು ಧರಿಸಿದ್ದರು. ಕೈಗಳಲ್ಲಿ ಬೃಹತ್ ಗಾತ್ರದ ’ಓಂ’ ಚಿಹ್ನೆಯುಳ್ಳ ಕೇಸರಿ ಭಾವುಟಗಳನ್ನು ಹಿಡಿದು ಸಾಗುತ್ತಿದ್ದರು. ಬೈಕ್‌ರ‍್ಯಾಲಿಯಲ್ಲಿ ಬೃಹತ್ ಗಾತ್ರದ ಹನುಮಾನ್ ಭಾವಚಿತ್ರವುಳ್ಳ ಧ್ವಜ ಎಲ್ಲರ ಗಮನ ಸೆಳೆಯಿತು. ರ‍್ಯಾಲಿಯಲ್ಲಿ ಸಾಗುವ ಸಂದರ್ಭದಲ್ಲಿ ಕಾರ್ಯಕರ್ತರು ಜೈ ಶ್ರೀರಾಮ್, ಹಿಂದೂ ಮಹಾ ಗಣಪತಿಗೆ ಜಯವಾಗಲಿ, ಹಿಂದೂ ಸನಾತನ ಧರ್ಮಕ್ಕೆ ಜಯವಾಗಲಿ ಎಂಬ ಜಯಘೋಷಗಳನ್ನು ಕೂಗುತ್ತಿದ್ದರು.
ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಪ್ರಭಂಜನ್, ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಶರಣ್‌ಕುಮಾರ್, ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಕೇಶವ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರಿನಾಥ್, ಸಂದೀಪ್ ಸೇರಿದಂತೆ ಅನೇಕ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೈಕ್‌ರ‍್ಯಾಲಿಯಲ್ಲಿ ಭಾಗವಹಿಸಿದ್ದರು.