ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲಿವುಡ್‌ನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿರುವ ನಟಿ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ಲೋಕ ಅಧ್ಯಾಯ 1 ಚಂದ್ರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಡಿ ಮೀರಿ ದಾಖಲೆ ಬರೆದಿದೆ. ಸಿನಿಮಾದ ಕಥೆಯ ಜೊತೆಗೆ ಶೂಟಿಂಗ್ ಮಾಡಿರುವ ಸ್ಥಳಗಳೂ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿವೆ. ಈ ಹಿನ್ನೆಲೆಯಲ್ಲಿ ಚಿತ್ರೀಕರಣ ನಡೆದ ಕಣ್ಣೂರಿನ ಕುಂಜಿಪರಂಬ ಗುಹೆಗಳ ಬಗ್ಗೆ ತಿಳಿದುಕೊಳ್ಳೋಣ.
ಕಣ್ಣೂರು ಜಿಲ್ಲೆಯ ಪಯ್ಯವೂರಿನಲ್ಲಿರುವ ಖಾಸಗಿ ರಬ್ಬರ್ ತೋಟದೊಳಗಿನ ಕುಂಜಿಪರಂಬ ಗುಹೆಗಳೇ ಸಿನಿಮಾದ ಪ್ರಮುಖ ಲೊಕೇಷನ್. ಕಣ್ಣೂರು ನಗರದಿಂದ ಸುಮಾರು 46 ಕಿ.ಮೀ ದೂರದಲ್ಲಿರುವ ಈ ಸ್ಥಳ ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ.
ಸುಮಾರು 500 ಮೀಟರ್ ಉದ್ದ ಮತ್ತು 15 ಮೀಟರ್ ಎತ್ತರ ಹೊಂದಿರುವ ಈ ಗುಹೆ ಸಂಪೂರ್ಣ ನೈಸರ್ಗಿಕವಾಗಿ ನಿರ್ಮಿತವಾಗಿದೆ. ಇದರೊಳಗೆ ಎರಡು ಕ್ಯಾಬಿನ್‌ಗಳಿದ್ದು, ಹಗಲಿನ ವೇಳೆಯಲ್ಲಿಯೂ ಸಂಪೂರ್ಣ ಕತ್ತಲೆಯೇ ಆವರಿಸುತ್ತದೆ.
ಗುಹೆಗಳು ಬಾವಲಿಗಳ ಗೂಡಾಗಿರುವುದರಿಂದ ಒಳಗೆ ಪ್ರವೇಶಿಸುವವರಿಗೆ ಟಾರ್ಚ್ ಅಗತ್ಯ. ಮಳೆಗಾಲದಲ್ಲಿ ಗುಹೆಗಳು ನೀರಿನಿಂದ ತುಂಬಿ ಹೋಗುವುದರಿಂದ ಪ್ರವೇಶ ಅಪಾಯಕಾರಿ.
ಸ್ಥಳೀಯರು ಬಾಲ್ಯದಲ್ಲಿ ಗುಹೆಯೊಳಗೆ ಆಟವಾಡಿದ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಈ ಸ್ಥಳವನ್ನು ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದಾಗಿದೆ. ಇದು ಖಾಸಗಿ ಜಾಗದಲ್ಲಿರುವುದರಿಂದ ಅಧಿಕೃತ ಪ್ರವಾಸೋದ್ಯಮಕ್ಕೆ ಸೇರಿಸಲಾಗಿಲ್ಲ. ಕೆಲವರು ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂಬ ದೂರುಗಳು ಇದ್ದರೂ ಪ್ರವಾಸಿಗರು ಇನ್ನೂ ಭೇಟಿ ನೀಡುತ್ತಿದ್ದಾರೆ.