ಹೊಸದಿಗಂತ ಡಿಜಿಟಲ್ ಡೆಸ್ಕ್:
ಬುಧವಾರ ತಡರಾತ್ರಿ ನಗರದಲ್ಲಿ 52.8 ಮಿಮೀ ಮಳೆಯಾಗಿದ್ದು, ಭಾರೀ ಮಳೆಗೆ 16 ಮರಗಳು ಧರೆಗುರುಳಿ ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಅರಣ್ಯ ವಿಭಾಗದಲ್ಲಿ 52 ದೂರುಗಳು ದಾಖಲಾಗಿದ್ದು, 36 ಮರದ ಕೊಂಬೆಗಳು ಧರೆಗುರುಳಿವೆ. ರಾಜಾಜಿನಗರದ 4ನ ಬ್ಲಾಕ್ ನಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಪರಿಣಾಮ 5 ಕಾರುಗಳು, ಒಂಟು ಟಾಟಾ ಏಸ್ ಮತ್ತು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು 3 ದ್ವಿಚಕ್ರ ವಾಹನಗಳು, ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್’ನ್ನು ಹಾನಿಗೊಳಿಸಿದೆ ಎಂದು ತಿಳಿದುಬಂದಿದೆ.
ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ರಸ್ತೆಯಲ್ಲಿ ಮರ ಬಿದ್ದು ಸುಮನಹಳ್ಳಿ ಕಡೆಗೆ ಸಾಗುವ ಸಂಚಾರದ ಮೇಲೆ ಪರಿಣಾಮ ಬೀರಿತ್ತು.
ಕಸ್ತೂರಿನಗರ, ಹೆಬ್ಬಾಳ, ದೊಮ್ಮಲೂರಿನ ಬಳಿಯ ಎಸಿಎಸ್ ಸೆಂಟರ್, ವರ್ತೂರು-ಗುಂಜೂರು ರಸ್ತೆ, ಹೊರಮಾವು ಮತ್ತು ಹೆಬ್ಬಾಳ ಮುಂತಾದ ಹಲವಾರು ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ನೀರು ನಿಂತ ಕಾರಣ ಸಂಚಾರ ನಿಧಾನವಾಗಿತ್ತು. ಇದಲ್ಲದೆ, ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿ ಸಂಚಾರ ದಟ್ಟಣೆ ಸಮಸ್ಯೆಗಳು ಕಂಡು ಬಂದಿತ್ತು. ತಗ್ಗು ಪ್ರದೇಶಗಳಲ್ಲಿನ ಕೆಲವು ಮನೆಗಳಿಗೂ ನೀರು ನುಗ್ಗಿ, ಜನರು ಸಮಸ್ಯೆ ಎದುರಿಸುವಂತಾಗಿದೆ.