ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ತನ್ನ ಅಭಿಯಾನವನ್ನು ಸೆಪ್ಟೆಂಬರ್ 12ರಂದು ಪ್ರಾರಂಭಿಸಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಎದುರಾಳಿ ಒಮಾನ್ ತಂಡವನ್ನು ಎದುರಿಸುತ್ತಿದೆ. ದುಬೈನಲ್ಲಿ ನಡೆಯುವ ಗ್ರೂಪ್-ಎ ಪಂದ್ಯವು ಪಾಕಿಸ್ತಾನಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಸೆಪ್ಟೆಂಬರ್ 14ರಂದು ಭಾರತ ವಿರುದ್ಧದ ಭರ್ಜರಿ ಮುಖಾಮುಖಿಗೆ ಮುನ್ನ ಬಲಿಷ್ಠ ಆರಂಭ ನೀಡಲು ಪಾಕಿಸ್ತಾನ ಬಯಸುತ್ತಿದೆ. ಇತ್ತೀಚೆಗೆ ಯುಎಇಯಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದಿರುವುದರಿಂದ ಪಾಕಿಸ್ತಾನದ ಮನೋಬಲ ಹೆಚ್ಚಾಗಿದೆ. ಈಗ ಏಷ್ಯಾಕಪ್‌ನಲ್ಲೂ ಅದೇ ಗೆಲುವಿನ ಜೋರು ಮುಂದುವರಿಸಲು ತಂಡ ತುದಿಗಾಲಲ್ಲಿ ನಿಂತಿದೆ.
ಪಾಕಿಸ್ತಾನ ಮತ್ತು ಒಮಾನ್ ನಡುವೆ ನಡೆಯಲಿರುವ ಈ ಏಷ್ಯಾಕಪ್‌ನ ನಾಲ್ಕನೇ ಪಂದ್ಯವು ದುಬೈನಲ್ಲಿ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ. ಮೊದಲು ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗುತ್ತವೆ ಎಂದು ಘೋಷಿಸಲಾಗಿದ್ದರೂ, ತೀವ್ರ ಬಿಸಿಲಿನ ಕಾರಣ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಏಷ್ಯಾಕಪ್‌ನ ಎಲ್ಲಾ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ನೇರಪ್ರಸಾರ ಮಾಡುತ್ತಿದೆ. ಅಭಿಮಾನಿಗಳು ವಿವಿಧ ಭಾಷೆಗಳಲ್ಲಿ ಪ್ರಸಾರವಾಗುವ ಸೋನಿ ಚಾನೆಲ್‌ಗಳಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಜೊತೆಗೆ ಸೋನಿ ಲೈವ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ನೇರಪ್ರಸಾರ ವೀಕ್ಷಿಸುವ ಅವಕಾಶವೂ ಇದೆ. ಭಾರತದಲ್ಲಿಯೂ ಸಹ ಪಾಕಿಸ್ತಾನದ ಪಂದ್ಯ ನೇರ ಪ್ರಸಾರವಾಗಲಿದೆ.
ಎರಡೂ ತಂಡಗಳ ಪಟ್ಟಿ
ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಸೀಮ್ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಅಫ್ರಿದಿ, ಸುಫ್ಯಾನ್ ಮೊಕಿಮ್.
ಒಮಾನ್ ತಂಡ: ಜತೀಂದರ್ ಸಿಂಗ್ (ನಾಯಕ), ವಿನಾಯಕ್ ಶುಕ್ಲಾ, ಮೊಹಮ್ಮದ್ ನದೀಮ್, ಹಮ್ಮದ್ ಮಿರ್ಜಾ, ಅಮೀರ್ ಕಲೀಮ್, ಸುಫಿಯಾನ್ ಮಹಮೂದ್, ಆಶಿಶ್ ಒಡೆದ್ರಾ, ಶಕೀಲ್ ಅಹ್ಮದ್, ಆರ್ಯನ್ ಬಿಶ್ತ್, ಸಮಯ್ ಶ್ರೀವಾಸ್ತವ, ಸುಫಿಯಾನ್ ಯೂಸುಫ್, ನದೀಮ್ ಖಾನ್, ಜಿಕ್ರಿಯಾ ಇಸ್ಲಾಂ, ಫೈಸಲ್ ಶಾಹ್, ಕರಣ್ ಮುಹಮ್ಮದ್ ಎ, ಕರಣ್ ಸೋನಾವಲೆ.