ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಲವು ಸ್ಟಾರ್ ನಟರು ಬಡವರಿಗೆ ಸಹಾಯ ಮಾಡುವ, ವಿಶಾಲ ಗುಣ ಹೊಂದಿರುವ ‘ಹೀರೋ’ ಆಗಿ ಕಾಣಿಸಿಕೊಳ್ಳುತ್ತಾರೆ. ಅವರಲ್ಲಿ ನಟ ರಾಘವ್ ಲಾರೆನ್ಸ್ ಕೂಡ ಒಬ್ಬರು.
ತಮಿಳಿನ ಸ್ಟಾರ್ ನಟ ರಾಘವ್ ಲಾರೆನ್ಸ್, ತಮ್ಮ ನಟನೆಯಷ್ಟೆ ತಾವು ಮಾಡುವ ಸಮಾಜ ಮುಖಿ ಕಾರ್ಯದಿಂದಲೂ ದೊಡ್ಡ ಮಟ್ಟದ ಹೆಸರು ಗಳಿಸಿದ್ದಾರೆ.
ಈಗಾಗಲೇ ನೂರಾರು ಮಂದಿ ಬಡ, ಅನಾಥ ಮಕ್ಕಳನ್ನು ದತ್ತು ಪಡೆದು ಅವರ ಜೀವನ ನಿರ್ವಹಣೆಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ತಮ್ಮ ಸ್ವಂತ ಮನೆಯನ್ನೇ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನಾಗಿ ಬದಲಾಯಿಸಿಬಿಟ್ಟಿದ್ದಾರೆ. ರಾಘವ್ ಅವರ ಈ ಕಾರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಘವ್, ‘ನಾನು ಡ್ಯಾನ್ಸ್ ಮಾಸ್ಟರ್ ಆಗಿದ್ದಾಗ ದುಡಿದ ಹಣದಿಂದ ಖರೀದಿ ಮಾಡಿದ ಮೊದಲ ಮನೆಯನ್ನು ನಾನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯನ್ನಾಗಿ ಪರಿವರ್ತನೆ ಮಾಡುತ್ತಿದ್ದೇನೆ. ಆ ಮನೆಯಲ್ಲಿ ಮೊದಲಿಗೆ ಅನಾಥ ಮಕ್ಕಳ ವಸತಿಗಾಗಿ ಮೀಸಲಿರಿಸಿದ್ದೆ. ಆದರೆ ಆ ಮಕ್ಕಳು ಬೆಳೆದು ದೊಡ್ಡವರಾಗಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಈಗ ಆ ಮನೆಯನ್ನು ಉಚಿತ ಶಾಲೆಯಾಗಿ ಬದಲಾಯಿಸುತ್ತಿದ್ದೇನೆ’ ಎಂದಿದ್ದಾರೆ.