Saturday, September 13, 2025

ಆಯಸ್ಸು ಗಟ್ಟಿ ಇತ್ತು ನೋಡಿ! ಹಾಟ್ ಏರ್ ಬಲೂನ್ ನಲ್ಲಿ ಬೆಂಕಿ: ಮಧ್ಯಪ್ರದೇಶ ಸಿಎಂ ಬಚಾವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹಾಟ್ ಏರ್ ಬಲೂನ್ ಹಾರಾಟಕ್ಕೆ ಸಿದ್ಧರಾಗಿದ್ದ ವೇಳೆ ಅಚ್ಚರಿ ಪಡುವಂತ ಘಟನೆ ನಡೆದಿದೆ. ಮಂದಸೋರ್ ಜಿಲ್ಲೆಯ ಗಾಂಧಿ ಸಾಗರ್ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಹಾರಾಟಕ್ಕೆ ಸಿದ್ಧವಾಗಿದ್ದ ಬಲೂನ್‌ನ ಎಂಜಿನ್ ಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಸಿಎಂ ಅಪಾಯದಿಂದ ಪಾರಾಗಿದ್ದಾರೆ.

ಭದ್ರತಾ ಸಿಬ್ಬಂದಿ ತಕ್ಷಣ ಎಚ್ಚರದಿಂದ ನಡೆದುಕೊಂಡು, ಮೋಹನ್ ಯಾದವ್ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಲೂನ್ ಗಗನಕ್ಕೆ ಎದ್ದ ನಂತರ ಈ ಘಟನೆ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ನೆಲದಲ್ಲೇ ಬೆಂಕಿ ಹೊತ್ತಿಕೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

ಈ ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಎಂಜಿನ್‌ನಿಂದ ಬೆಂಕಿಯ ಜ್ವಾಲೆಗಳು ಹೊರಹೊಮ್ಮುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ನಂತರ ತಕ್ಷಣವೇ ಬಲೂನ್ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದ್ದು, ಬೆಂಕಿಯನ್ನು ನಂದಿಸಲಾಗಿದೆ.

ಸರ್ಕಾರಿ ವರದಿಯ ಪ್ರಕಾರ, ಈ ಅವಘಡದಲ್ಲಿ ಯಾರಿಗೂ ಅಪಾಯವಾಗಿಲ್ಲ. ಆದರೆ ಈ ಘಟನೆ ಭದ್ರತಾ ಕ್ರಮಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ. ಭವಿಷ್ಯದಲ್ಲಿ ಇಂತಹ ಸಾಹಸ ಕಾರ್ಯಕ್ರಮಗಳಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಸಂದೇಶವನ್ನು ಈ ಘಟನೆ ನೆನಪಿಸಿಕೊಟ್ಟಿದೆ.

ಇದನ್ನೂ ಓದಿ