ಹೊಸದಿಗಂತ ವರದಿ ಹಾಸನ:
ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಸಂಭವಿಸಿದ ದುರಂತ ನಿಜಕ್ಕೂ ದುರಾದೃಷ್ಟಕರವಾಗಿದೆ ಎಂದು ಹಾಸನ ಉಸ್ತುವಾರಿ ಸಚಿವರು ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹೇಳಿದರು.

ಅವಘಡದಲ್ಲಿ ಮೃತರಾದವರ ನಿವಾಸಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಟ್ರಕ್ ಚಾಲಕ ಭುವನೇಶ್ ಎಂಬಾತನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದ್ದು, ಆತನ ವಿರುದ್ಧ ಈಗಾಗಲೇ ಗೋರೂರ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಜನರಿಂದ ತೀವ್ರ ಥಳಿತಕ್ಕೊಳಗಾಗಿ ಗಾಯಗೊಂಡಿರುವ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ. ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ಘಟನೆಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿರುವ ಕೆಲವು ಅಹಿತಚಿಂತಕರು ಸಾಮಾಜಿಕ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಇಂತಹ ದುರ್ವರ್ತನೆಗಳು ಸಹ ಕಾನೂನು ರೀತಿಯ ಅಪರಾಧವಾಗಿದ್ದು, ಅಂತಹವರ ವಿರುದ್ಧವೂ ಸಹ ಗಟ್ಟಿಯಾದ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.
