ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಭೀಕರ ದುರಂತದಲ್ಲಿ ಮೃತರ ಕುಟುಂಬದರವರಿಗೆ ಮುಖ್ಯಮಂತ್ರಿಗಳೇ ತಾವು ಮಾನವೀಯತೆ, ಹೃದಯ ವೈಶಾಲ್ಯತೆ ತೋರಿ ತಲಾ 20 ಲಕ್ಷ ರೂ. ಪರಿಹಾರ ಕೊಡಬೇಕು ಎಂದು JDS ಪಕ್ಷವು ಆಗ್ರಹಿಸಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಮಾನವೀಯ ಮೌಲ್ಯ ಕಳೆದುಕೊಂಡಿರಾ ಸಿದ್ದರಾಮಯ್ಯ ಅವರೇ ? ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ಹರಿದು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಕುಟುಂಬಕ್ಕೆ ಆಸರೆಯಾಗಬೇಕಾಗಿದ್ದರು ಬಲಿಯಾಗಿದ್ದಾರೆ.
ಅಂದು ಆರ್‌ಸಿಬಿ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು 25 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಕೇರಳದ ವ್ಯಕ್ತಿ ಆನೆ ದಾಳಿಯಿಂದ ಮೃತಪಟ್ಟಾಗ 15 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ವಯನಾಡಿನಲ್ಲಿ ದುರಂತವಾದಾಗ ಕರ್ನಾಟಕ ಸರ್ಕಾರದಿಂದ 10 ಕೋಟಿ ಪರಿಹಾರ ಘೋಷಿಸಲಾಗಿತ್ತು. ಸಿಎಂ ಸಿದ್ಧರಾಮಯ್ಯನವರೇ ಹಾಸನದ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೂ ಮಾನವೀಯ ನೆಲೆಯಲ್ಲಿ ಇನ್ನೂ ಹೆಚ್ಚಿನ ಪರಿಹಾರ ಕೊಟ್ಟು, ಹೃದಯ ವೈಶಾಲ್ಯತೆ ತೋರಿ ಎಂದು ಹೇಳಿದೆ.