Saturday, September 13, 2025

ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ HD ದೇವೇಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇತ್ತ ಜಿಲ್ಲಾಸ್ಪತ್ರೆಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಹೆಚ್​.ಡಿ ದೇವೇಗೌಡರ ಜೊತೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್, ಶಾಸಕ ಎ ಮಂಜು, ಶಾಸಕ ಬಾಲಕೃಷ್ಣ ಹಾಗೂ ಎಂಎಲ್​​ಸಿ ಸೂರಜ್ ರೇವಣ್ಣ ಅವರು ಇದ್ದರು.

ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ಅವರು, ಆಡಳಿತವನ್ನು ದೂಷಿಸಲು ಬಯಸುವುದಿಲ್ಲ. ಪೊಲೀಸರು ಜಾಗರೂಕರಾಗಿರಬೇಕಾಗಿತ್ತು. ಯುವ ಪೀಳಿಗೆ ಡ್ಯಾನ್ಸ್​ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ವಾಹನ ಬಂದಿದೆ. ತುಂಬಾ ದುಃಖಕರ ಘಟನೆ ಎಂದು ಹೇಳಿದ್ದಾರೆ.

ಈ ಘಟನೆ ಸಂಬಂಧ ಯಾರನ್ನು ದೂಷಿಸುವುದು?, ಡಿಸಿ ಅಥವಾ ಎಸ್‌ಪಿ?. ಇಲ್ಲಿ ನಾನು ರಾಜಕೀಯವನ್ನು ಬೆರೆಸಲು ಬಯಸುವುದಿಲ್ಲ. ಇದು ಕೇಂದ್ರ ಸ್ಥಳ, ನಾನು ಆ ಹಳ್ಳಿಯಲ್ಲಿ ಹುಟ್ಟಿದ್ದೇನೆ. ನನ್ನ ತಾಯಿ ತವರು ಅದು. ನನ್ನ ಮಕ್ಕಳಾದ ಹೆಚ್​​.ಡಿ ರೇವಣ್ಣ, ಹೆಚ್​.ಡಿ ಸುರೇಶ್ ಅಲ್ಲಿಯವರು. ಸಂಸದರು ಮತ್ತು ಶಾಸಕರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ರೇವಣ್ಣ ಅಲ್ಲಿಗೆ ಹೋಗಿದ್ದಾರೆ ಏಕೆಂದರೆ ಅದು ಅವರ ಕ್ಷೇತ್ರ ಎಂದು ಹೇಳಿದ್ದಾರೆ.

93 ವರ್ಷದಲ್ಲೂ ಬಂದಿರೋದು ಗೌರವದಿಂದ. ವೈದ್ಯರ ಬಳಿ ಈಗಾಗಲೇ ಚರ್ಚೆ ಮಾಡಿದ್ದೇನೆ. ಪಕ್ಷದ ವತಿಯಿಂದ ದೊಡ್ಡ ಗಾಯಾಳುಗಳಿಗೆ 25೦೦೦ ರೂಪಾಯಿ, ಮಧ್ಯಮ ಗಾಯಾಳುಗಳಿಗೆ 20,೦೦೦ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ 15,೦೦೦ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ರೋಗಿಗಳಿಗೆ ತೊಂದರೆ ಆಗೋದು ಬೇಡ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಹಾರ ಮೊತ್ತ ಹೆಚ್ಚು ಮಾಡಬೇಕು ಎಂದು ಹೇಳುತ್ತೇನೆ. ಸಾಧ್ಯವಾದರೆ 10 ಲಕ್ಷ ರೂಪಾಯಿ ಕೊಡುವಂತೆ ಅವರನ್ನ ಕೋರಲಾಗುವುದು. ನೆರೆ ರಾಜ್ಯದಲ್ಲಿ ಹೇಗೆ ಪರಿಹಾರ ಕೊಡ್ತಾ ಇದ್ದಾರೆ. ಇಲ್ಲಿ‌ ಇಂತಹ ‌ದುರ್ಘಟನೆ ಆದಾಗ, ಕೆಲವು ಕುಟುಂಬಗಳು ನಿರ್ಗತಿಕರಾಗೋ ರೀತಿ ಇದೆ. ವಯಸ್ಸಾದ ತಂದೆ, ತಾಯಿ ಇದ್ದಾರೆ. ನಾನು ಸರ್ಕಾರದ ವಿರುದ್ಧ ಮಾತಾಡಿಲ್ಲ. ರಾಜಕೀಯ ಮಾಡೋದಕ್ಕೆ‌ ಬೇಕಾದಷ್ಟು ವಿಚಾರ ಇದೆ. ಪ್ರತಿ ಊರಲ್ಲಿ ಗಣೇಶ‌ ಇಟ್ಟು ಪೂಜೆ ಮಾಡಬೋದು. ಮುಸ್ಲಿಮರು ಕೂಡ ಪೂಜೆ ಮಾಡ್ತಾರೆ. ನಮ್ಮ ಹುಡುಗರು ಮಾಡುವಾಗ ಸ್ವಲ್ಪ ಲೋಕಲ್ ಪೊಲೀಸ್ ಮುಂಜಾಗ್ರತೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ