ಹೊಸದಿಗಂತ ವರದಿ,ಚಿತ್ರದುರ್ಗ
ವಿಶ್ವ ಹಿಂದೂ ಪರಿಷತ್ – ಬಜರಂಗದಳ ಸಂಯುಕ್ತಾಶ್ರಯದಲ್ಲಿ ಕಳೆದ ೧೮ ವರ್ಷಗಳಿಂದ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹಿಂದೂ ಮಹಾ ಗಣಪತಿ ಉತ್ಸವವು ದಿನದಿಂದ ದಿನಕ್ಕೆ ಜನಪ್ರಿಯಗಳಿಸುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಪಂಪವೇಲು ಹೇಳಿದರು.
ವಿಶ್ವ ಹಿಂದೂ ಪರಿಷತ್ – ಬಜರಂಗದಳ ಸಂಯುಕ್ತಾಶ್ರಯದಲ್ಲಿ ನಗರದ ವಿಜ್ಞಾನ ಕಾಲೇಜು ಎದುರಿನ ಜೈನಧಾಮದಲ್ಲಿ ಪ್ರತಿಷ್ಟಾಪಿಸಿದ್ದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಅಂಗವಾಗಿ ಶನಿವಾರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ಹಿಂದು ಸಮಾಜದ ಹಕ್ಕು, ಆಚರಣೆಗಳು, ಕಾರ್ಯಕ್ರಮಗಳಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ. ಅದರಂತೆ ಹಿಂದೂ ಮಹಾಗಣಪತಿ ಉತ್ಸವಕ್ಕೂ ಏನೆಲ್ಲಾ ಅಡೆತಡೆಗಳು ಬಂದವು. ಇದರಿಂದಾಗಿ ಮತ್ತಷ್ಟು ಜನಪ್ರಿಯತೆ ಹೆಚ್ಚಾಗಿ ನಮ್ಮ ದೇಶ ಮಾತ್ರವಲ್ಲದೇ ವಿದೇಶಗಳೂ ಇತ್ತ ತಿರುಗಿ ನೋಡುವಂತಾಗಿದೆ ಎಂದರು.
ರಾಜ್ಯ ಸರ್ಕಾರ ಪದೇ ಪದೇ ಹಿಂದೂ ಆಚರಣೆಗಳ ಮೇಲೆ ನಿರ್ಬಂಧ ಹೇರುವ ಕೆಲಸ ಮಾಡುತ್ತಿದೆ. ಬ್ಯಾನರ್, ಬಂಟಿಂಗ್ಸ್, ಡಿ.ಜೆ. ಹೆಸರಿನಲ್ಲಿ ತೊಂದರೆ ಕೊಡಲಾಗುತ್ತಿದೆ. ನನಗೂ ಸಹ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಬಂಧ ಹೇರಲಾಗಿತ್ತು. ಆದರೆ ಹಿಂದೂ ಮಹಾಗಣಪತಿ ಶಕ್ತಿಯಿಂದ ಇಂದಿನ ಶೋಭಾಯಾತ್ರೆಯಲ್ಲಿ ಡಿ.ಜೆ. ಬಳಕೆಗೆ ಅನುಮತಿ ದೊರೆತಿದೆ. ಅದರಂತೆ ನನಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ನ್ಯಾಯಾಲಯ ಅನುಮತಿ ನೀಡಿದೆ. ಇದು ಹಿಂದೂ ಮಹಾಗಣಪತಿಯ ಆಶೀರ್ವಾದದಿಂದ ಆಗಿರುವ ಪರಿವರ್ತನೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ – ಬಜರಂಗದಳ ಸಂಯುಕ್ತಾಶ್ರಯದಲ್ಲಿ ಕಳೆದ ೧೮ ವರ್ಷಗಳಿಂದ ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಇಷ್ಟು ವರ್ಷಗಳಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಈ ಉತ್ಸವದಲ್ಲಿ ಭಾಗವಹಿಸುವ ಜನರು ಶ್ರದ್ದಾ ಭಕ್ತಿಯಿಂದ ಭಾಗವಹಿಸುತ್ತಾರೆ. ಹಾಗಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸುವುದಿಲ್ಲ. ಇಷ್ಟು ಜನರನ್ನು ಸೇರುವ ಕಾರ್ಯಕ್ರಮಗಳನ್ನು ಸರ್ಕಾರವೂ ಸಹ ಇಷ್ಟು ಅಚ್ಚುಕಟ್ಟಾಗಿ ಮಾಡಲಾಗದು. ಆದರೆ ಇಲ್ಲಿನ ಸಂಘಟಕರು ಜವಾಬ್ಧಾರಿಯಿಂದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಇಲ್ಲಿ ಪ್ರತಿ ನಡೆಯುವ ಉತ್ಸವದಲ್ಲಿ ಯಾವುದೇ ಜಾತಿ ಬೇಧವಿಲ್ಲದೇ ಎಲ್ಲ ಜಾತಿಯ ಜನರು ಭಾಗವಹಿಸುತ್ತಾರೆ. ಎಲ್ಲರೂ ಸೌಹಾರ್ಧಯುತವಾಗಿ ನಡೆದುಕೊಳ್ಳುತ್ತಾರೆ. ಹಾಗಾಗಿ ಇಲ್ಲಿ ಎಲ್ಲ ವರ್ಗಗಳ ಜನರು ಮುಕ್ತ ಮನಸ್ಸಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕೇವಲ ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಜನರು ಆಗಮಿಸುತ್ತಾರೆ. ಇದರಿಂದ ಲಕ್ಷೋಪ ಲಕ್ಷ ಜನ ಈ ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಹಾಗಾಗಿ ಇಂತಹ ಉತ್ಸವಗಳಿಗೆ ಚಿತ್ರದುರ್ಗದ ಜನರು ಸದಾ ಬೆಂಬಲವಾಗಿ ನಿಲ್ಲಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹೊಸದುರ್ಗದ ಉಪ್ಪಾರ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಡಿವಾಳ ಗುರುಪೀಠದ ಮಡಿವಾಳ ಮಾಚಿದೇವ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಮಧುಗಿರಿ ಮಾಜಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಅನಿತ್‌ಕುಮಾರ್, ಡಾ.ಸಿದ್ದಾರ್ಥ ಗುಂಡಾರ್ಪಿ, ಉಮೇಶ್ ಕಾರಜೋಳ, ಉತ್ಸವ ಸಮಿತಿ ಅಧ್ಯಕ್ಷರಾದ ಶರಣ್‌ಕುಮಾರ್, ಬದ್ರಿನಾಥ್, ಬಜರಂಗದಳ ಪ್ರಾಂತ ಸಹ ಸಂಯೋಜಕರು ಪ್ರಭಂಜನ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಷಡಾಕ್ಷರಪ್ಪ, ಕೇಶವ, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.