Saturday, September 13, 2025

ಕೇರಳದ ವಿವಿಧ ದೇವಾಲಯಗಳಿಗೆ ಬಂತು ಬಾಂಬ್ ಬೆದರಿಕೆಯ ಇ- ಮೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ, ಅಟ್ಟುಕಲ್ ದೇವಿ ದೇವಸ್ಥಾನ ಸೇರಿದಂತೆ ತಿರುವನಂತಪುರಂನ ವಿವಿಧ ದೇವಾಲಯಗಳಿಗೆ ಶನಿವಾರ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ .

ಬೆದರಿಕೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಬಾಂಬ್ ನಿಷ್ಕ್ರಿಯ ದಳ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಈ ಕುರಿತು ಪೊಲೀಸರು ಕೂಡ ತನಿಖೆ ಆರಂಭಿಸಿದ್ದಾರೆ.

ಶುಕ್ರವಾರವಷ್ಟೇ ದೆಹಲಿ ಮತ್ತು ಬಾಂಬೆ ಹೈಕೋರ್ಟ್‌ಗಳಲ್ಲಿ ಈ ರೀತಿಯ ಬೆದರಿಕೆ ಕರೆಗಳು ಬಂದಿತ್ತು.ದೆಹಲಿ ಹೈಕೋರ್ಟ್ ನ ನ್ಯಾಯಾಧೀಶರ ಕೊಠಡಿ ಮತ್ತು ಆವರಣದ ಇತರ ಸ್ಥಳಗಳಲ್ಲಿ ಮೂರು ಸ್ಫೋಟಕಗಳನ್ನು ಇರಿಸಲಾಗಿದೆ ಎನ್ನುವ ಕುರಿತು ಶುಕ್ರವಾರ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕಚೇರಿ ಕೆಲಸಗಳನ್ನು ಸ್ಥಳಾಂತರಿಸಲಾಗಿತ್ತು. ಬಳಿಕ ಬಾಂಬೆ ಹೈಕೋರ್ಟ್ ಗೂ ಇದೇ ರೀತಿಯ ಬೆದರಿಕೆ ಬಂದಿದ್ದು, ತೀವ್ರ ಪರಿಶೀಲನೆಯ ಬಳಿಕ ಇದೊಂದು ಸುಳ್ಳು ಬೆದರಿಕೆ ಎನ್ನುವುದು ಸ್ಪಷ್ಟವಾಗಿತ್ತು.

ಇದೀಗ ಶನಿವಾರ ಕೇರಳದ ಪದ್ಮನಾಭ ಸ್ವಾಮಿ ದೇವಸ್ಥಾನ ಮತ್ತು ತಿರುವಂತಪುರಂನಲ್ಲಿರುವ ಅಟ್ಟುಕಲ್ ದೇವಿ ದೇವಸ್ಥಾನಕ್ಕೆ ಬಂದಿದೆ. ಇಮೇಲ್ ಮೂಲಕ ಬೆದರಿಕೆ ಬಂದಿದ್ದು ಮಾಹಿತಿ ಪಡೆದ ತಕ್ಷಣ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ತೆರಳಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, ಇದೊಂದು ಸುಳ್ಳು ಬೆದರಿಕೆ ಎಂದು ತೋರುತ್ತಿದೆ ಮತ್ತು ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ಮಾಹಿತಿ ಕಂಡುಬಂದಿಲ್ಲ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ