Sunday, September 14, 2025

CINE | 8 ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡಿದ ಅಮೂಲ್ಯ: ‘ಪೀಕಬೂ’ ಟೀಸರ್ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಸಿನಿರಂಗದಲ್ಲಿ ಹೀರೋಯಿನ್ ಆಗಿ ಮಿಂಚಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ ನಟಿ ಅಮೂಲ್ಯ, ಮದುವೆಯ ನಂತರ ಸಿನಿಮಾ ಕ್ಷೇತ್ರದಿಂದ ದೂರವಿದ್ದರು. ಕುಟುಂಬ ಜೀವನದಲ್ಲಿ ತೊಡಗಿಸಿಕೊಂಡಿದ್ದ ಅವರು, ಅಭಿಮಾನಿಗಳು ಎಷ್ಟೇ ಕಾತರದಿಂದ ಕಾದರೂ, ನಟನೆಗೆ ಮರಳಲು ಸೂಕ್ತವಾದ ಕಥೆಗಾಗಿ ನಿರೀಕ್ಷಿಸುತ್ತಿದ್ದರು. ಇದೀಗ ಆ ನಿರೀಕ್ಷೆಗೆ ಅಂತ್ಯ ಬಂದಿದೆ. ಅಮೂಲ್ಯ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅದಕ್ಕೆ ‘ಪೀಕಬೂ’ ಎಂದು ಶೀರ್ಷಿಕೆ ಇಡಲಾಗಿದೆ.

‘ಶ್ರಾವಣಿ ಸುಬ್ರಮಣ್ಯ’ ಚಿತ್ರ ಖ್ಯಾತಿಯ ನಿರ್ದೇಶಕ ಮಂಜು ಸ್ವರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಬರೋಬ್ಬರಿ 8 ವರ್ಷಗಳ ಬಳಿಕ ನಾಯಕಿಯಾಗಿ ಅಮೂಲ್ಯ ಸ್ಕ್ರೀನ್ ಮೇಲೆ ಮರಳುತ್ತಿದ್ದಾರೆ. ವಿಶೇಷವೆಂದರೆ, ಸೆಪ್ಟೆಂಬರ್ 14ರಂದು ಅಮೂಲ್ಯ ಅವರ ಹುಟ್ಟುಹಬ್ಬದಂದು ಈ ಹೊಸ ಚಿತ್ರವನ್ನು ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ.

ಚಿಕ್ಕದಾದ ಟೀಸರ್ ಮೂಲಕ ಅಮೂಲ್ಯ ಅವರ ಕಮ್‌ಬ್ಯಾಕ್‌ಗೆ ತಂಡವು ಸ್ವಾಗತ ಕೋರಿದೆ. ಟೀಸರ್‌ನಲ್ಲಿ ಅವರು ಮೊದಲಿನಂತೆಯೇ ಕಾಣಿಸಿಕೊಂಡಿದ್ದು, ಡ್ಯಾನ್ಸ್ ಮೂಲಕ ತಮ್ಮ ಎನರ್ಜಿ ತೋರಿಸಿದ್ದಾರೆ. ಈ ಕೊರಿಯೋಗ್ರಫಿ ವಿ. ನಾಗೇಂದ್ರ ಅವರದ್ದು. ಚಿತ್ರದ ಶೀರ್ಷಿಕೆ ‘ಪೀಕಬೂ’ ಎಂದರೆ ಮಕ್ಕಳನ್ನು ನಗಿಸಲು ಬಳಸುವ ಪದ ಎಂದು ಚಿತ್ರತಂಡ ಹೇಳಿದೆ. ಒಂದೊಳ್ಳೆ ಮೆಸೇಜ್ ಹಾಗೂ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿರಲಿವೆ ಎಂದು ನಿರೀಕ್ಷಿಸಲಾಗಿದೆ.

ಈ ಚಿತ್ರವನ್ನು ಶ್ರೀ ಕೆಂಚಾಂಬಾ ಫಿಲ್ಮ್ಸ್ ಅಡಿಯಲ್ಲಿ ಗಣೇಶ್ ಕೆಂಚಾಂಬಾ ನಿರ್ಮಿಸುತ್ತಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ ನೀಡಲಿದ್ದಾರೆ. ಹೀರೋ ಯಾರು ಎಂಬುದನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

ಇದನ್ನೂ ಓದಿ