ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಅಪ್ಲಿಕೇಶನ್‌ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡ ಬಳಿಕ, ಈ ಪ್ರಕರಣದಲ್ಲಿ ಹಲವು ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ನಟ-ನಟಿಯರ ಹೆಸರುಗಳು ಹೊರಬರುತ್ತಿವೆ. ಈಗ ಬಲು ಜನಪ್ರಿಯವಾಗಿರುವ 1xbet ಬೆಟ್ಟಿಂಗ್ ಆಪ್‌ಗೆ ಸಂಬಂಧಿಸಿದಂತೆ ನಟಿ ಊರ್ವಶಿ ರೌಟೆಲಾ ಮತ್ತು ಮಾಜಿ ಸಂಸದೆ-ನಟಿ ಮಿಮಿ ಚಕ್ರವರ್ತಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ.
ಇಡಿ ಅಧಿಕಾರಿಗಳ ಸೂಚನೆಯಂತೆ, ಮಿಮಿ ಚಕ್ರವರ್ತಿ ಸೆಪ್ಟೆಂಬರ್ 15ರಂದು, ಊರ್ವಶಿ ರೌಟೆಲಾ ಸೆಪ್ಟೆಂಬರ್ 16ರಂದು ವಿಚಾರಣೆಗೆ ಹಾಜರಾಗಬೇಕಿದೆ. ಇಬ್ಬರೂ ಸಹ 1xbet ಪರವಾಗಿ ಪ್ರಚಾರ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಪ್ರಚಾರಕ್ಕಾಗಿ ಹಣ ಪಡೆದಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ.
ಇದಕ್ಕೂ ಮುನ್ನ ಇದೇ ಪ್ರಕರಣದಲ್ಲಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರಿಗೂ ಇಡಿ ಸಮನ್ಸ್ ನೀಡಲಾಗಿತ್ತು. ಅಲ್ಲದೆ ತೆಲುಗು ನಟ-ನಟಿಯರಾದ ಪ್ರಕಾಶ್ ರೈ, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ ಸೇರಿದಂತೆ ಹಲವರಿಗೂ ನೊಟೀಸ್ ಜಾರಿಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಮಂಚು ಲಕ್ಷ್ಮಿ, “ನಾವು ಕೇವಲ ಜಾಹೀರಾತಿನಲ್ಲಿ ನಟಿಸಿದ್ದೇವೆ, ವಿಚಾರಣೆ ಮಾಡಬೇಕಿರುವುದು ಆಪ್ ಆರಂಭಿಸಿದವರನ್ನು” ಎಂದು ಹೇಳಿದ್ದರು.