ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ 700 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು ಮಾಡಿಸಲಾಯಿತು.
700 ಕೆ.ಜಿ ತೂಕ ಹೊತ್ತ ಅಭಿಮನ್ಯು ಸರಾಗವಾಗಿ ಬನ್ನಿಮಂಟಪದವರೆಗೆ ಸಾಗಿದೆ. ಇದಕ್ಕೂ ಮೊದಲು ಅಂಬಾರಿ ಕಟ್ಟುವ ಸ್ಥಳದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನಂತರ 200 ಕೆ.ಜಿ ತೂಕದ ಮರದ ಅಂಬಾರಿ, ಅದರಲ್ಲಿ 300 ಕೆ.ಜಿ ಮರಳಿನ ಮೂಟೆ ಹಾಗೂ 200 ಕೆ.ಜಿ ತೂಕದ ನಮ್ದ ಹಾಗೂ ವಿಶೇಷ ಗಾದಿ ಸೇರಿ 700 ಕೆ.ಜಿ. ತೂಕವನ್ನು ಅಭಿಮನ್ಯು ಮೇಲೆ ಹೊರಿಸಿ ತಾಲೀಮು ನಡೆಸಲಾಯಿತು.
ಅರಮನೆಯಿಂದ ಪ್ರಾರಂಭವಾದ ತಾಲೀಮು ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಬನ್ನಿಮಂಟಪದವರೆಗೆ ಸಾಗಿತು. ಅಭಿಮನ್ಯುಗೆ ಹೆಣ್ಣಾನೆಗಳಾದ ಹೇಮಾವತಿ ಹಾಗೂ ಕಾವೇರಿ ಸಾಥ್ ಕೊಟ್ಟವು. ಮರದ ಅಂಬಾರಿ ಹೊತ್ತ ಅಭಿಮನ್ಯು ಹಿಂದೆ ಉಳಿದ ಆನೆಗಳು ಸಾಲಾಗಿ ಸಾಗಿದವು.