Sunday, September 21, 2025

ಹಬ್ಬದ ದಿನ ಸೀರೆ ಬ್ಯುಸಿನೆಸ್‌ ಶುರು ಮಾಡೋಣ ಎಂದಿದ್ದ ದಂಪತಿಗೆ ಶಾಕ್‌, ಆರ್ಡರ್‌ ಮಾಡಿದ ಎಲ್ಲ ಸೀರೆಯೂ ಹರಿದಿತ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗೆ ಆನ್‌ಲೈನ್‌ ಸ್ಕ್ಯಾಮ್‌ಗಳು ಹೆಚ್ಚಾಗಿವೆ. ಹಬ್ಬದ ದಿನದಂದು ಹೊಸ ಬ್ಯುಸಿನೆಸ್‌ ಆರಂಭಿಸೋಣ ಎಂದುಕೊಂಡಿದ್ದ ದಂಪತಿಗು ಕೂಡ ಇದೇ ಶಾಕ್‌ ಎದುರಾಗಿದೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ನಿವಾಸಿ ಮನೋಹರ ಹಾಗೂ ಅವರ ಪತ್ನಿ ಕಾಳಮ್ಮ, ಸೋಶಿಯಲ್ ಮೀಡಿಯಾದಲ್ಲಿ “₹100ಕ್ಕೆ 3 ಸೀರೆ” ಎಂಬ ಆಕರ್ಷಕ ಆಫರ್ ಜಾಹೀರಾತನ್ನು ಕಂಡು ಆಕರ್ಷಿತರಾದರು. ಬಣ್ಣ ಬಣ್ಣದ, ವೈವಿಧ್ಯಮಯ ವಿನ್ಯಾಸದ ಸೀರೆಗಳನ್ನು ನೋಡಿ ಅವರು ಫಿದಾ ಆಗಿ ತಕ್ಷಣವೇ ವ್ಯವಹಾರ ಮಾಡಲು ನಿರ್ಧರಿಸಿದರು.

ಸೀರೆ ವ್ಯಾಪಾರ ಆರಂಭಿಸುವ ಉದ್ದೇಶದಿಂದ, ಜಾಹೀರಾತಿನಲ್ಲಿ ಕೊಟ್ಟಿದ್ದ ನಂಬರಿಗೆ ಕರೆ ಮಾಡಿ, 10 ಸಾವಿರ ರೂಪಾಯಿಗೆ 70 ಸೀರೆಗಳನ್ನು ಆರ್ಡರ್ ಮಾಡಿದರು. ಆರ್ಡರ್ ಕಳಿಸಿದ ಕೆಲವೇ ದಿನಗಳಲ್ಲಿ ಅವರ ಮನೆಗೆ ಪಾರ್ಸಲ್ ತಲುಪಿತು. ಆದರೆ ಪಾರ್ಸಲ್ ತೆರೆದ ಕ್ಷಣದಲ್ಲೇ ದಂಪತಿಗೆ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಬಂದಿದ್ದ ಎಲ್ಲಾ 70 ಸೀರೆಗಳೂ ಹರಿದು ಹೋಗಿದ್ದು, ಬಳಕೆ ಮಾಡಲು ಅಸಾಧ್ಯವಾಗಿತ್ತು. ಕೆಲ ಸೀರೆಗಳಿಂದ ದುರ್ವಾಸನೆಯೂ ಹೊಡೆಯುತ್ತಿತ್ತು. ಹೊಸ ಡಿಸೈನ್ ಸೀರೆಗಳ ಬದಲಾಗಿ, ಹರಿದ ಮತ್ತು ಡ್ಯಾಮೇಜ್ ಆದ ಸೀರೆಗಳನ್ನು ಕಳುಹಿಸಿದ್ದನ್ನು ನೋಡಿ ಅವರು ದಿಗ್ಭ್ರಮೆಗೊಂಡರು.

ಹರಿದ ಸೀರೆಗಳ ಬಗ್ಗೆ ವಿಚಾರಿಸಲು ಮಾರಾಟಗಾರರ ಫೋನ್ ನಂಬರ್‌ಗೆ ಸಂಪರ್ಕಿಸಲು ಯತ್ನಿಸಿದಾಗ, ಪ್ರತಿಕ್ರಿಯೆ ದೊರಕಲಿಲ್ಲ. ಕೆಲ ಸಮಯದ ನಂತರ ಆ ನಂಬರ್ ಅವರನ್ನು ಬ್ಲಾಕ್ ಮಾಡಲಾಯಿತು. ಬೇರೆ ನಂಬರ್ ಮೂಲಕ ಸಂಪರ್ಕಿಸಿದಾಗ, ನಾನಾ ನೆಪಗಳನ್ನು ಹೇಳಿ ತಕ್ಷಣವೇ ಕಾಲ್ ಕಟ್ ಮಾಡುವ ರೀತಿಯಲ್ಲಿ ಗ್ಯಾಂಗ್ ವರ್ತಿಸಿತು. ಇದರಿಂದ ದಂಪತಿ ಸಂಪೂರ್ಣವಾಗಿ ವಂಚಿತರಾದರು. ಈ ಬಗ್ಗೆ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಅವರಿಂದ ತಕ್ಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅವರು ದೂಷಿಸಿದ್ದಾರೆ.

ಇದನ್ನೂ ಓದಿ