Thursday, December 25, 2025

ವಿಧಿಯಾಟಕ್ಕೆ ಚೂರಾದ ಮದುವೆ ಕನಸು: ಆ ಒಂದು ಲಾಕೆಟ್ ಅಪ್ಪನಿಗೆ ಮಗಳ ಮೃತದೇಹ ತೋರಿಸಿಕೊಟ್ಟಿತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಭ್ರಮದ ಮದುವೆಗೆ ಸಿದ್ಧತೆ ನಡೆಯುತ್ತಿತ್ತು, ಹೊಸ ಬದುಕಿನ ಕನಸು ಕಣ್ಣ ಮುಂದಿತ್ತು. ಆದರೆ ವಿಧಿಯ ಕ್ರೂರ ಆಟಕ್ಕೆ ಎಲ್ಲವೂ ಬೂದಿಯಾಗಿದೆ. ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಸಂಭವಿಸಿದ ಖಾಸಗಿ ಬಸ್ ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಹಲವು ಜೀವಗಳು ಬಲಿಯಾಗಿದ್ದು, ಮೃತದೇಹಗಳ ಗುರುತು ಹಿಡಿಯುವುದೇ ಪೋಷಕರಿಗೆ ಸವಾಲಾಗಿತ್ತು.

ಬಸ್‌ನಲ್ಲಿ ಸಜೀವ ದಹನಗೊಂಡಿದ್ದ ಮೃತದೇಹಗಳಲ್ಲಿ ತನ್ನ ಮಗಳು ಮಾನಸಾ ಇದ್ದಾಳೆಯೇ ಎಂಬ ಆತಂಕದಲ್ಲಿದ್ದ ತಂದೆ ಚಂದ್ರೇಗೌಡ ಅವರಿಗೆ ಶವಾಗಾರದಲ್ಲಿ ಎದೆ ಸೀಳುವ ದೃಶ್ಯ ಎದುರಾಯಿತು. ಮಗಳಿಗೆ ತಾವೇ ಪ್ರೀತಿಯಿಂದ ಕೊಡಿಸಿದ್ದ ‘ಗಣೇಶನ ಪೆಂಡೆಂಟ್’ ಇರುವ ಚಿನ್ನದ ಸರದ ಮೂಲಕ “ಇದೇ ನನ್ನ ಮಗಳು” ಎಂದು ಅವರು ಗುರುತು ಹಚ್ಚಿ ಬಿಕ್ಕಿ ಬಿಕ್ಕಿ ಅತ್ತರು. “ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗಲು ನಾನೇ ಖುದ್ದಾಗಿ ಬಸ್ ಹತ್ತಿಸಿ ಬಂದಿದ್ದೆ, ಅದೇ ಕೊನೆ ಎಂದು ಗೊತ್ತಿರಲಿಲ್ಲ” ಎನ್ನುವ ಅವರ ಮಾತುಗಳು ಅಲ್ಲಿದ್ದವರ ಕಣ್ಣನ್ನು ತೇವಗೊಳಿಸಿದವು.

ಮೃತರಾದ ನವ್ಯಾ, ಮಾನಸಾ ಮತ್ತು ಮಿಲನ ಎಂಬುವವರು ಆತ್ಮೀಯ ಗೆಳತಿಯರಾಗಿದ್ದರು. ಮೂವರೂ ಇಂಜಿನಿಯರಿಂಗ್ ಮುಗಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು. ರಜೆ ಇದ್ದ ಕಾರಣಕ್ಕೆ ಸಿಗಂದೂರಿಗೆ ಪ್ರವಾಸ ಹೊರಟಿದ್ದ ಈ ಗೆಳತಿಯರ ಗುಂಪಿಗೆ ಸಾವು ಅಪಘಾತದ ರೂಪದಲ್ಲಿ ಬಂದಪ್ಪಳಿಸಿದೆ.

ಮೃತ ನವ್ಯಾ ಅವರ ತಂದೆ ಮಂಜಪ್ಪ ಅವರ ನೋವು ಕೂಡ ಹೇಳತೀರದು. ಏಪ್ರಿಲ್‌ನಲ್ಲಿ ನವ್ಯಾ ಮದುವೆ ನಿಶ್ಚಯವಾಗಿತ್ತು. ಇತ್ತ ಮಾನಸಾ ಎಂಗೇಜ್‌ಮೆಂಟ್ ಕೂಡ ಮುಗಿದು ಮದುವೆ ಸಿದ್ಧತೆಗಳು ನಡೆಯುತ್ತಿದ್ದವು. ಅತ್ತಿಗೆಗೆ ಬಳೆ ತೊಡಿಸಿ, ಮದುವೆ ಸಂಭ್ರಮ ನೋಡಬೇಕಿದ್ದ ಪೋಷಕರು ಇಂದು ಮಗಳ ಮೃತದೇಹದ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.

error: Content is protected !!