Wednesday, December 10, 2025

ನಂಬಿಕೆ ಕಳೆದುಕೊಂಡ ಸರ್ಕಾರಕ್ಕೆ ಟೀಕಿಸುವ ಹಕ್ಕಿಲ್ಲ: ಹೆಚ್‌ಡಿಕೆ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರವು ಜನರ ನಂಬಿಕೆಯನ್ನೇ ಉಳಿಸಿಕೊಳ್ಳದ ಕಾರಣ, ಟೀಕೆ ಮಾಡಲು ಅದಕ್ಕೆ ಯಾವುದೇ ನೈತಿಕ ಹಕ್ಕು ಉಳಿದಿಲ್ಲ ಎಂದು ಅವರು ತೀಕ್ಷ್ಣವಾಗಿ ನುಡಿದರು.

ಶನಿವಾರ ಮಂಡ್ಯದಲ್ಲಿರುವ ಮೈಷುಗರ್ ಕಾರ್ಖಾನೆಗೆ ತಮ್ಮ ವೇತನದ 19.24 ಲಕ್ಷ ಮೊತ್ತದ ಚೆಕ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌ಡಿಕೆ, “ರಾಜಕೀಯ ದುರುದ್ದೇಶದಿಂದ ಕೇವಲ ಕೇಂದ್ರ ಸರ್ಕಾರದ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ. ನಮ್ಮನ್ನು ಪ್ರಧಾನ ಮಂತ್ರಿಗಳ ಮುಂದೆ ನಿಲ್ಲಬೇಕು ಎನ್ನುವವರಿಗೆ, ಮೊದಲು ನಿಮ್ಮ ಆಡಳಿತದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ,” ಎಂದು ತರಾಟೆಗೆ ತೆಗೆದುಕೊಂಡರು.

ರಾಜ್ಯ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆಯೂ ಸಚಿವರು ಆಕ್ರೋಶ ವ್ಯಕ್ತಪಡಿಸಿದರು. “ನೆರೆ ರಾಜ್ಯದ ರಾಜ್ಯಪಾಲರು ಕಾರ್ಕಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಕ್ಕೆ ನಾನು ಒಂದು ಕೋಟಿ ರೂಪಾಯಿ ಕೇಳಿದ್ದೆ. ಆದರೆ ರಾಜ್ಯ ಸರ್ಕಾರವು ಒಂದು ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ,” ಎಂದು ದೂರಿದರು.

ಈ ಬಗ್ಗೆ ಪ್ರಶ್ನಿಸಿದರೆ, “ನಿಮ್ಮ ಕಾಲದಲ್ಲಿ ನೀವು ಎಲ್ಲವನ್ನೂ ಕೊಟ್ಟಿದ್ದೀರಾ?” ಎಂಬ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುತ್ತಾರೆ. ಇದು ಸರ್ಕಾರದ ಜವಾಬ್ದಾರಿ ಇಲ್ಲದ ವರ್ತನೆಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಮುಂದುವರೆದು, “ಇಂದು ಹಾಸನದಲ್ಲಿ ದೊಡ್ಡ ಮಟ್ಟದ ಜಾಹೀರಾತು ನೀಡಿ, ನಮ್ಮ (ಜೆಡಿಎಸ್-ಬಿಜೆಪಿ ಮೈತ್ರಿ) ಕಾಲದಲ್ಲಿ ಅನುದಾನ ಬಿಡುಗಡೆಯಾಗಿದ್ದ ಕಾಮಗಾರಿಗೆ ಟೇಪ್ ಕಟ್ ಮಾಡಲು ಕಾಂಗ್ರೆಸ್ ನಾಯಕರು ಹೋಗಿದ್ದಾರೆ,” ಎಂದು ಆಪಾದಿಸಿ, ಕಾಂಗ್ರೆಸ್‌ನ ರಾಜಕೀಯ ಲಾಭದ ಪ್ರಯತ್ನವನ್ನು ಖಂಡಿಸಿದರು.

error: Content is protected !!