ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಒಬ್ಬ ದ್ವಿಚಕ್ರ ವಾಹನ ಸವಾರ ದಂಡ ತಪ್ಪಿಸಿಕೊಳ್ಳಲು ಮಾಡಿದ ವಿಚಿತ್ರ ಪ್ರಯತ್ನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೂಪೇನ ಅಗ್ರಹಾರ ಬಳಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ, ಬೈಕ್ ಹಿಂಬದಿ ಸವಾರನೊಬ್ಬ ಹೆಲ್ಮೆಟ್ ಧರಿಸುವ ಬದಲು ಬಾಣಲೆಯನ್ನು ತಲೆಯ ಮೇಲೆ ಇಟ್ಟುಕೊಂಡು ಪ್ರಯಾಣಿಸುತ್ತಿರುವುದನ್ನು ಕಾಣಬಹುದು.
ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು “Karnataka Portfolio” ಎಂಬ ಎಕ್ಸ್ ಖಾತೆ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಯಾಗದಂತೆ ಬಾಣಲೆ ಧರಿಸಿರುವ ಈ ದೃಶ್ಯವನ್ನು ನೋಡಿದ ನೆಟ್ಟಿಗರು “ಇದು ಪೀಕ್ ಬೆಂಗಳೂರು ಕ್ಷಣ” ಎಂದು ವ್ಯಂಗ್ಯ ಮಾಡಿದ್ದಾರೆ.
ಕೆಲವರು ಕಾಮೆಂಟ್ ಮಾಡುತ್ತಾ, “ಬೆಂಗಳೂರು ಟ್ರಾಫಿಕ್ ಇಷ್ಟು ಹುಚ್ಚುಸ್ಥಿತಿಗೆ ತಲುಪಿದೆ ಎಂದರೆ ಈಗ ಪಾತ್ರೆಗಳೇ ರಕ್ಷಣಾತ್ಮಕ ಸಾಧನಗಳಾಗಿವೆ” ಎಂದು ಬರೆದಿದ್ದಾರೆ. ಮತ್ತೊಬ್ಬರು “ಅವನ ಹೆಂಡತಿ ಈಗ ಅಡುಗೆ ಮನೆಯಲ್ಲಿ ಬಾಣಲೆಯನ್ನು ಹುಡುಕುತ್ತಿರಬಹುದು” ಎಂದು ಹಾಸ್ಯಮಾಡಿದ್ದಾರೆ.
ವಿಡಿಯೋ ಹಂಚಿಕೆಗೊಂಡ ಕೆಲ ಗಂಟೆಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನೂ, ನೂರಾರು ಕಾಮೆಂಟ್‌ಗಳನ್ನೂ ಗಳಿಸಿದೆ.
ಈ ಘಟನೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ನೈಜ ಸ್ಥಿತಿಯನ್ನು ತೋರಿಸುತ್ತಿದ್ದು, ಹಾಸ್ಯಾಸ್ಪದವಾಗಿ ಕಂಡರೂ ರಸ್ತೆ ಸುರಕ್ಷತೆ ಬಗ್ಗೆ ಗಂಭೀರವಾದ ಚರ್ಚೆಗೆ ಕಾರಣವಾಗಿದೆ. ಪೊಲೀಸರ ದೃಷ್ಟಿಗೆ ಈ ವಿಡಿಯೋ ಬಂದ ನಂತರ ಕ್ರಮ ಕೈಗೊಳ್ಳುವ ಸಾಧ್ಯತೆಗಳೂ ಇವೆ.

