ಹೊಸದಿಗಂತ ಅಂಕೋಲಾ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಗ್ರಾಮಸ್ಥರಲ್ಲಿ ಚಿರತೆಯ ಭಯ ಮನೆ ಮಾಡಿದೆ. ತಾಲೂಕಿನ ರಾಮನಗುಳಿ ಮಜರೆ ಬಳಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಮೇಯುತ್ತಿದ್ದ ಐದು ತಿಂಗಳ ಗರ್ಭಿಣಿ ಆಕಳನ್ನು ಚಿರತೆಯೊಂದು ಬೇಟೆಯಾಡಿ ಕೊಂದು ಹಾಕಿದ ಆತಂಕಕಾರಿ ಘಟನೆ ವರದಿಯಾಗಿದೆ.
ಮಂಜುನಾಥ ಗೌರೀಶ ನಾಯಕ ಎಂಬುವವರಿಗೆ ಸೇರಿದ ಈ ಆಕಳು, ಕಳೆದ ನಾಲ್ಕು ದಿನಗಳ ಹಿಂದೆಯೇ ಚಿರತೆ ದಾಳಿಗೆ ಬುತ್ತಿಯಾಗಿದೆ. ಚಿರತೆಯು ಆಕಳನ್ನು ಕೊಂದ ನಂತರ ಅದನ್ನು ಅರಣ್ಯ ಪ್ರದೇಶದತ್ತ ಎಳೆದೊಯ್ದಿದೆ ಎಂದು ತಿಳಿದುಬಂದಿದೆ.
ಅರಣ್ಯ ಇಲಾಖೆಯಿಂದ ಪರಿಶೀಲನೆ
ಘಟನಾ ಸ್ಥಳದಲ್ಲಿ ಚಿರತೆಯ ಸ್ಪಷ್ಟ ಹೆಜ್ಜೆಗುರುತುಗಳು ಪತ್ತೆಯಾಗಿವೆ. ಅಲ್ಲದೆ, ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪಿಂಗ್ ಕ್ಯಾಮೆರಾದಲ್ಲಿ ಚಿರತೆಯ ಚಲನವಲನಗಳು ಸೆರೆಯಾಗಿವೆ.
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ, ಉಪವಲಯ ಅರಣ್ಯಾಧಿಕಾರಿ ಹಜರತ್ ಅಲಿ ಕುಂದಗೋಳ ಮತ್ತು ಅರಣ್ಯ ಗಸ್ತುಪಾಲಕ ಸೋಮನಾಥ ಕಂಬಾರ ಅವರು ಸ್ಥಳಕ್ಕೆ ಭೇಟಿ ನೀಡಿದರು. ಅವರು ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸಿ, ಪಂಚನಾಮೆ ನಡೆಸಿದ್ದಾರೆ. ಇಲಾಖೆಯು ಸೂಕ್ತ ಪರಿಹಾರ ಮತ್ತು ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ. ಈ ಘಟನೆಯಿಂದಾಗಿ ಸ್ಥಳೀಯ ಜಾನುವಾರು ಮಾಲೀಕರಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.

