ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ದೊಡ್ಡ ಭಯೋತ್ಪಾದನಾ ದಾಳಿ ವಿಫಲಗೊಳಿಸಲಾಗಿದೆ. ಗುಪ್ತಚರ ಮಾಹಿತಿಯ ಆಧಾರದಲ್ಲಿ ಕೈಗೊಂಡ ಶೋಧ ಕಾರ್ಯದ ವೇಳೆ ಸುಮಾರು 4 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪತ್ತೆಹಚ್ಚಿ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ.
ಥನಮಂಡಿ ತಹಸಿಲ್ ವ್ಯಾಪ್ತಿಯ ಡೋರಿ ಮಾಲ್‌ನ ಕಲ್ಲಾರ್ ಪ್ರದೇಶದ ದಟ್ಟ ಅರಣ್ಯದಲ್ಲಿ ಬುಧವಾರದಿಂದಲೇ ಸೇನೆ ಮತ್ತು ಜಮ್ಮು–ಕಾಶ್ಮೀರ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಅನುಮಾನಾಸ್ಪದ ಚಟುವಟಿಕೆಗಳ ಸುಳಿವು ದೊರೆತ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಆರಂಭಿಸಲಾಗಿತ್ತು. ಶೋಧದ ವೇಳೆ ಬಂಡೆಗಳ ಮಧ್ಯೆ ಅನುಮಾನಾಸ್ಪದ ವಸ್ತುಗಳು ಕಂಡುಬಂದಿದ್ದು, ಪರಿಶೀಲನೆ ಮಾಡಿದಾಗ ಅದರಲ್ಲಿ ಭಾರೀ ಪ್ರಮಾಣದ ಐಇಡಿ ಅಡಗಿಸಲಾಗಿರುವುದು ದೃಢಪಟ್ಟಿತು.
ಇದನ್ನೂ ಓದಿ: FOOD | ಆಲ್ಮಂಡ್ ಚಿಕನ್ ಗ್ರೇವಿ: ರುಚಿಯ ಜೊತೆಗೆ ಪೌಷ್ಟಿಕಾಂಶ ತುಂಬಿದ ವಿಶೇಷ ಅಡುಗೆ!
ಭದ್ರತಾ ಪಡೆಗಳ ತಕ್ಷಣದ ಕ್ರಮದಿಂದ ಸ್ಫೋಟಕವನ್ನು ಸುರಕ್ಷಿತವಾಗಿ ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಈ ಐಇಡಿ ಸ್ಫೋಟಗೊಂಡಿದ್ದರೆ ಭಾರೀ ನಷ್ಟ ಸಂಭವಿಸುವ ಸಾಧ್ಯತೆ ಇತ್ತು. ಸ್ಫೋಟಕ ಸಾಧನವನ್ನು ಹೆಚ್ಚಿನ ತನಿಖೆ ಮತ್ತು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

