Sunday, January 11, 2026

ಗೆದ್ದು ತಿಂಗಳಾದ್ರು ಟ್ರೋಫಿ ಕೈಸೇರಿಲ್ಲ! ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಷ್ಯಾ’ಕಪ್’ ಚರ್ಚೆಗೆ ಸಿದ್ಧ: ಬಿಸಿಸಿಐ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡದ ಸಂಭ್ರಮ ಈಗಿನ್ನು ಅಪೂರ್ಣವಾಗಿದೆ. ಕಾರಣ, ಏಷ್ಯಾಕಪ್ ಗೆದ್ದು ಬರೋಬ್ಬರಿ 34 ದಿನಗಳು ಕಳೆದರೂ ಟ್ರೋಫಿ ಇನ್ನೂ ಟೀಮ್ ಇಂಡಿಯಾ ಕೈ ಸೇರಿಲ್ಲ. ಈ ಘಟನೆ ಕ್ರಿಕೆಟ್ ಪ್ರಪಂಚದಲ್ಲಿ ಕುತೂಹಲ ಮತ್ತು ಅಸಮಾಧಾನ ಮೂಡಿಸಿದೆ.

ಸೆಪ್ಟೆಂಬರ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜಯ ಸಾಧಿಸಿದಾಗ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮತ್ತು ಪಾಕಿಸ್ತಾನ ಸರ್ಕಾರದ ಆಂತರಿಕ ವ್ಯವಹಾರಗಳ ಸಚಿವರಾದ ಮೊಹ್ಸಿನ್ ನಖ್ವಿ ಟ್ರೋಫಿ ಹಸ್ತಾಂತರಿಸಲು ಹಾಜರಿದ್ದರು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದರು. ಈ ನಿರಾಕರಣೆ ಬಳಿಕ ಮೊಹ್ಸಿನ್ ನಖ್ವಿ ಟ್ರೋಫಿ ಮತ್ತು ವಿನ್ನರ್ ಮೆಡಲ್‌ಗಳನ್ನು ಹೊಟೇಲ್‌ಗೆ ಕೊಂಡೊಯ್ಯುವಂತೆ ಸೂಚಿಸಿದರು.

ಆ ನಂತರದಿಂದ ಟ್ರೋಫಿ ಪಾಕಿಸ್ತಾನದವರ ಕೈಯಲ್ಲೇ ಉಳಿದಿದೆ. ಬಿಸಿಸಿಐ ಹಲವು ಬಾರಿ ಎಸಿಸಿ ಅಧ್ಯಕ್ಷರನ್ನು ಸಂಪರ್ಕಿಸಿ ಟ್ರೋಫಿಯನ್ನು ಹಿಂದಿರುಗಿಸುವಂತೆ ಮನವಿ ಮಾಡಿದರೂ, ನಖ್ವಿಯ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಿಸಿಸಿಐ ಅಧಿಕಾರಿಗಳ ಪ್ರಕಾರ, ಈ ವಿಷಯ ಇದೀಗ ಗಂಭೀರ ಹಂತ ತಲುಪಿದ್ದು, ಮುಂದಿನ ಐಸಿಸಿ ಸಭೆಯಲ್ಲಿ ಇದನ್ನು ಅಧಿಕೃತವಾಗಿ ಪ್ರಸ್ತಾಪಿಸಲು ತೀರ್ಮಾನಿಸಲಾಗಿದೆ.

ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯೆ ನೀಡಿದ್ದು, “ಒಂದು ತಿಂಗಳು ಕಳೆದರೂ ಟ್ರೋಫಿ ನಮಗೆ ಬಂದಿಲ್ಲ. ನಾವು 10 ದಿನಗಳ ಹಿಂದೆ ಎಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟ್ರೋಫಿ ಇನ್ನೂ ಅವರ ಬಳಿಯೇ ಇದೆ. ಮೂರು ದಿನಗಳೊಳಗೆ ಅದು ನಮ್ಮ ಕೈ ಸೇರದಿದ್ದರೆ, ನವೆಂಬರ್ 4 ರಂದು ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ನಾವು ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸುತ್ತೇವೆ,” ಎಂದು ತಿಳಿಸಿದ್ದಾರೆ.

“ಟ್ರೋಫಿ ಮುಂಬೈಯಲ್ಲಿರುವ ಬಿಸಿಸಿಐ ಕಚೇರಿಗೆ ತಲುಪುತ್ತದೆ ಎಂಬ ವಿಶ್ವಾಸವಿದೆ. ಆದರೆ ಅದು ಆಗದಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಈ ವಿಚಾರವನ್ನು ಗಂಭೀರವಾಗಿ ಎತ್ತುತ್ತೇವೆ,” ಎಂದರು.

ಒಟ್ಟಿನಲ್ಲಿ, ಏಷ್ಯಾಕಪ್ ಗೆದ್ದು ತಿಂಗಳು ಕಳೆದರೂ ಟ್ರೋಫಿ ವಿವಾದ ಕೊನೆಗೊಂಡಿಲ್ಲ. ಬಿಸಿಸಿಐ ಮತ್ತು ಎಸಿಸಿ ನಡುವಿನ ಈ ಉದ್ವಿಗ್ನತೆ ಇದೀಗ ಕ್ರಿಕೆಟ್ ರಾಜತಾಂತ್ರಿಕ ವಿಷಯವಾಗಿ ಪರಿಣಮಿಸಿದೆ. ಬಿಸಿಸಿಐ ಮುಂದಿನ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಈಗ ಕ್ರಿಕೆಟ್ ಅಭಿಮಾನಿಗಳ ಕುತೂಹಲದ ಕೇಂದ್ರವಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!